ಸುಲಿಗೆ ಹಫ್ತಾ ವಸೂಲಿ ಎರಡು ಗ್ಯಾಂಗ್‌ಗಳ ಸೆರೆ

ಬೆಂಗಳೂರು,ನ.೧೭-ನಗರದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಎರಡು ಗ್ಯಾಂಗ್‌ನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಗ್ಯಾಂಗ್ ಜಾಮೀನಿಗಾಗಿ ಹಫ್ತಾ ವಸೂಲಿಗೆ ಇಳಿದಿದ್ದರೆ, ಮತ್ತೊಂದು ಶೋಕಿಗಾಗಿ ರಾಬರಿ ಮಾಡುತ್ತಿದ್ದು ಎರಡು ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುತ್ತಮುತ್ತ ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನ ಗುರಿಯಾಗಿಸಿ ಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ ಕುಖ್ಯಾತ ಪಾಪಣ್ಣ ಗ್ಯಾಂಗನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಪಾಪಣ್ಣ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಜಾಮೀನು ಪಡೆದುಕೊಳ್ಳಲು ಹಣದ ಅಭಾವವಿದ್ದ ಕಾರಣ ಪಾಪಣ್ಣ ಸಹಚರರು ಹಫ್ತಾ ವಸೂಲಿಗೆ ಇಳಿದಿದ್ದಾರೆ.
ಅದೇ ರೀತಿ ಬಾಗಲೂರಿನ ಕಟ್ಟಿಗೇನಹಳ್ಳಿಯಲ್ಲಿ ವ್ಯಾಪಾರಿಯೊಬ್ಬರಿಗೆ ಧಮ್ಕಿ ಹಾಕಿದ್ದ ಪಾಪಣ್ಣನ ಸಹಚರರು ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ವ್ಯಾಪಾರಸ್ಥರು ಒಪ್ಪದೆ ಇದ್ದಾಗ ಚಾಕುವಿನಿಂದ ಇರಿದು ಗ್ಯಾಂಗ್ ಪರಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಪಾಪಣ್ಣ ಗ್ಯಾಂಗನ್ನು ಬಂಧಿಸಿರುವ ಯಲಹಂಕ ಪೊಲೀಸರು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಶಾಸ್ತ್ರಿ ಹುಡುಗರಿಗೆ ತಕ್ಕ ಶಾಸ್ತಿ
ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಸುಲಿಗೆ ಮಾಡುತ್ತಿದ್ದ ಶಾಸ್ತ್ರಿ ಅಲಿಯಾಸ್ ಶ್ರೀಪಾದ್ ಶಾಸ್ತ್ರಿ ಗ್ಯಾಂಗನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ಯಾರಾದರೂ ಒಂಟಿಯಾಗಿ ಸಿಕ್ಕರೆ ಅಂತಹವರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಅದೇ ರೀತಿ ಕೊಡಿಗೆಹಳ್ಳಿಯಲ್ಲಿ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶ್ರೀಪಾದ್ ಶಾಸ್ತ್ರಿ ಸೇರಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಸೇರಿದಂತೆ ೧.೫ ಲಕ್ಷ ಬೆಲೆ ಬಾಳುವ ಚಿನ್ನದ ಉಂಗುರ, ಮೊಬೈಲ್, ಹೊಂಡಾ ಆಕ್ಟೀವಾ ಬೈಕ್ ಜಪ್ತಿ ಮಾಡಿದ್ದಾರೆ.