ಸುಲಫಲ ಮಠದ ಶ್ರೀಗಳು ಶಾಸಕ ಪ್ರಿಯಾಂಕ್ ಖರ್ಗೆಯವರ ಏಜೆಂಟ್: ಪ್ರಮೋದ್ ಮುತಾಲಿಕ್

ಕಲಬುರಗಿ,ನ.24:ಮೈಸೂರು, ಕೊಡಗು ಸಂಸದ ಪ್ರತಾಪಸಿಂಹ ಅವರು ಕ್ಷಮೆ ಕೇಳದಿದ್ದರೆ 15 ದಿನಗಳಲ್ಲಿ ಅವರ ಮನೆ ಹೊಕ್ಕು ಅವರ ಚಡ್ಡಿ ಕಳೆದು ಹೊಡೆಯುವುದಾಗಿ ಬೆದರಿಕೆ ಹಾಕಿರುವ ಸುಲಫಲ ಮಠದ ಮಹಾಂತ ಶಿವಾಚಾರ್ಯರು ಶಾಸಕ ಪ್ರಿಯಾಂಕ್ ಖರ್ಗೆಯವರ ಏಜೆಂಟರು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಮೂದಲಿಸಿದರು.
ಬುಧವಾರ ಜೇವರ್ಗಿ ತಾಲ್ಲೂಕಿನ ಅಂದೋಲಾಕ್ಕೆ ಜಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆಯವರ ಕುರಿತು ಸಂಸದ ಪ್ರತಾಪಸಿಂಹ ಅವರು ರಾಜಕೀಯ ವಿಷಯ ಕುರಿತು ಮಾತನಾಡಿದ್ದಾರೆ. ಅದು ಅವರ ರಾಜಕೀಯ ವಿಚಾರವಾಗಿದೆ ಎಂದರು.
ಆದಾಗ್ಯೂ, ಸುಲಫಲ ಮಠದ ಶ್ರೀಗಳು ಓರ್ವ ಧಾರ್ಮಿಕ ಮುಖಂಡರಾಗಿ ಧಾರ್ಮಿಕ ವಿಚಾರಗಳ ಕುರಿತು ಮಾತನಾಡಬೇಕು. ಅದನ್ನು ಬಿಟ್ಟು ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಮಠಾಧಿಪತಿಗಳು ಮಠ, ಧರ್ಮ, ದೇಶ ಉಳಿಸುವ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆಯವರ ಪರವಾಗಿ ಸುಲಫಲ ಮಠದ ಶ್ರೀಗಳು ಮಾತನಾಡುವ ಅಗತ್ಯವೂ ಇರಲಿಲ್ಲ. ಪ್ರಿಯಾಂಕ್ ಖರ್ಗೆಯವರಿಂದ ಶ್ರೀಗಳು ಎಷ್ಟು ಹಣ ತೆಗೆದುಕೊಂಡಿದ್ದೀರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿನ ಮತಾಂತರ ಪ್ರಕ್ರಿಯೆಯನ್ನು ತಡೆಯುವ ಕೆಲಸವನ್ನು ಮಠಾಧೀಶರು ಮಾಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಮತಾಂತರ ಹೆಚ್ಚಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ 50ಕ್ಕೂ ಹೆಚ್ಚು ಮಠಾಧೀಶರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಆಗ್ರಹಿಸಿದ್ದೆವು. ಈಗಲೂ ಸಹ ಆ ಬೇಡಿಕೆ ಇಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈಗಾಗಲೇ ವೀರಶೈವ ಲಿಂಗಾಯತರು ಮತಾಂತರವಾಗುತ್ತಿದ್ದು, ಅದನ್ನು ತಡೆಯಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಇದು ಸ್ವಾಗತಾರ್ಹವಾಗಿದೆ. ದೀನ, ದಲಿತರು, ಬಡವರು ಆಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ. ಎಲ್ಲ ಕಡೆ ಕ್ರಿಶ್ಚಿಯನ್ ಸಮುದಾಯದವರು ತಂತ್ರಗಳನ್ನು ಉಪಯೋಗಿಸಿ ಮತಾಂತರ ಮಾಡುತ್ತಿದ್ದಾರೆ. ಈ ಕುರಿತು ಶಾಸಕರೊಬ್ಬರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಹೆಚ್ಚಿನ ಧ್ವನಿ ಕೇಳಿ ಬರುತ್ತಿದೆ. ಮಹಾತ್ಮಾಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದ್ ಅವರೂ ಸಹ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಕೂಡಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರದೇ ಇದ್ದಲ್ಲಿ ಮುಂದಿನ 2022ರ ಜನವರಿ ತಿಂಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ಇನ್ನು ಅಕ್ರಮ ಗೋವುಗಳ ಸಾಗಾಣಿಕೆ ಮುಂದುವರೆದಿದೆ. ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಆದ್ದರಿಂದ ಕೂಡಲೇ ಅಕ್ರಮ ಗೋವುಗಳ ಸಾಗಾಣಿಕೆ ಮತ್ತು ಕಸಾಯಿ ಖಾನೆಗಳನ್ನು ಬಂದ್ ಮಾಡಲು ಹತ್ತು ಅಂಶಗಳ ಬೇಡಿಕೆಯನ್ನು ಇದೇ ಡಿಸೆಂಬರ್ 2ರಂದು ರಾಜ್ಯದ ಪಶು ಸಂಗೋಪನಾ ಖಾತೆಯ ಸಚಿವ ಪ್ರಭು ಚವ್ಹಾಣ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ. ಆ ಹತ್ತು ಅಂಶಗಳನ್ನು ಜಾರಿಗೆ ತಂದಾಗ ಮಾತ್ರ ಅಕ್ರಮ ಗೋವುಗಳ ಸಾಗಣೆ ತಡೆಯಲು ಸಾಧ್ಯ ಎಂದು ಅವರು ಹೇಳಿದರು.
ಮಸೀದೆಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಸರ್ಕಾರ ನಿಷೇಧಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಸುಪ್ರಿಂಕೋರ್ಟ್ ಆದೇಶ ಹೊರಡಿಸಿದರೂ ಸಹ ಆ ಆದೇಶಕ್ಕೂ ಕಿಮ್ಮತ್ತುಕೊಡುತ್ತಿಲ್ಲ. ಹೀಗಾಗಿ ದಿನದಲ್ಲಿ ಐದು ಬಾರಿ ಮಸೀದೆಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆ ಶಬ್ದದಿಂದ ಕಿರಿಕಿರಿ ಉಂಟಾಗುತ್ತಿದೆ. ಈ ಕುರಿತು ಶ್ರೀರಾಮಸೇನೆಯು ಹೋರಾಟವನ್ನೂ ಸಹ ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದರು.
ಸುಪ್ರಿಮ್‍ಕೋರ್ಟ್ ನಿರ್ದೇಶನದ ಪ್ರಕಾರ ಯಾವುದೇ ಮಸೀದೆಗಳಲ್ಲಿ ಧ್ವನಿವರ್ಧಕ ಉಪಯೋಗಿಸಬಾರದು. ರಾತ್ರಿ 10-30ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕದ ಸದ್ದು ಮಸೀದೆಗಳಿಂದ ಹೊರಬಾರದು ಎಂಬ ನಿರ್ದೇಶನವಿದೆ. ಹಾಗಾಗಿ ಆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.