ಸುರ್ಜೇವಾಲಾ ಆರೋಪ ಆಯೋಗ ನಿರಾಕರಣೆ

ನವದೆಹಲಿ,ಮೇ .೧೨-ಕರ್ನಾಟಕ ವಿಧಾನಸಭೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ವಿದ್ಯುನ್ಮಾನ ಮತಯಂತ್ರ- ಇವಿಎಂ ಬಳಸಲಾಗಿದೆ ಎನ್ನುವ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಳಸಲಾದ ವಿದ್ಯುನ್ಮಾನ ಮತ ಯಂತ್ರಗಳನ್ನು ಈ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಉಪಯೋಗಿಸಲಾಗಿತ್ತು ಎಂಬ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಯೋಗ ತಿಳಿಸಿದೆ.

ಸುಳ್ಳು ವದಂತಿಗಳನ್ನು ಹರಡುವವರನ್ನು ಬಿಟ್ಟು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಈ ಕುರಿತು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.

“ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ತಯಾರಿಸಿರುವ ಹೊಸ ಇವಿಎಂಗಳನ್ನು ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಚುನಾವಣೆಗಳಲ್ಲಿ ಬಳಸಲಾದ ಇವಿಎಂಗಳನ್ನು ಬಳಸಲಾಗಿಲ ಎಂದು ದಕ್ಷಿಣ ಆಫ್ರಿಕಾದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಚುನಾವಣೆ ಇಲ್ಲಸ್ಟ್ರೇಟೆಡ್ ಬುಕ್‌ಲೆಟ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು” ಎಂದು ಆಯೋಗ ಸ್ಪಷ್ಟಪಡಿಸಿದೆ.

ಇವಿಎಂಗಳ ಕುರಿತಾಗಿ ತಪ್ಪು ಮಾಹಿತಿ ಹಬ್ಬಿಸುತ್ತಿರುವ ಮೂಲಗಳನ್ನು ಕಾಂಗೆಸ್ ಪಕ್ಷ ಬಹಿರಂಗಪಡಿಸಬೇಕು. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಮೇ ೧೫ರ ಸಂಜೆ ೫ ಗಂಟೆ ಒಳಗೆ ಕಾಂಗ್ರೆಸ್ ದೃಢಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದೆ.

ಇಸಿಐಎಲ್ ತಯಾರಿಸಿರುವ ಹೊಸ ಮತಯಂತ್ರಗಳನ್ನು ಮಾತ್ರ ಕರ್ನಾಟಕದಲ್ಲಿ ಬಳಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಮಾಹಿತಿ ಇತ್ತು. ಇವಿಎಂಗಳ ಸಾಗಣೆ ಹಾಗೂ ಅವುಗಳ ಬಳಕೆಯ ಪ್ರತಿ ಹಂತದಲ್ಲಿಯೂ ಕಾಂಗ್ರೆಸ್ ಪ್ರತಿನಿಧಿಗಳು ಇದ್ದರು ಎಂದು ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಕರ್ನಾಟಕ ಚುನಾವಣೆಗೆ ಬಳಸಲಾಗುವ ಇವಿಎಂಗಳಿಗೆ ಸಂಬಂಧಿಸಿದ ಮೇಲಿನ ಪ್ರಮಾಣಿತ ಕಾರ್ಯಾಚರಣಾ ಕಾರ್ಯ ವಿಧಾನ ಪ್ರತಿ ಹಂತದಲ್ಲೂ ಐಎನ್‌ಸಿ ಪ್ರತಿನಿಧಿಗಳು ಭಾಗವಹಿಸಿದ್ದ ದೃಢೀಕರಣ ಹೊಂದಿದೆ ಎಂದು ಹೇಳಲಾಗಿದೆ.