ಸುರೇಶ್‍ಬಾಬು ತಾಳಕ್ಕೆ ಶ್ರೀರಾಮುಲು ಕುಣಿಯಬಾರದು- ಶಾಸಕ ಗಣೇಶ್ ಅಸಮಾಧಾನ

ಕಂಪ್ಲಿ ಮಾ 31 : ಸಕ್ಕರೆ ಕಾರ್ಖಾನೆ ಜಾಗ ಕಬಳಿಕೆ ಸೇರಿದಂತೆ ಇನ್ನಿತರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಟಿ.ಎಚ್.ಸುರೇಶ್‍ಬಾಬು ತಮ್ಮ ಮಾವ ಶ್ರೀರಾಮುಲು ಅವರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಳಿಯನ ತಾಳಕ್ಕೆ ಮಾವ ಶ್ರೀರಾಮುಲು ಕುಣಿಯಬಾರದು ಎಂದು ಶಾಸಕ ಜೆ ಎನ್ ಗಣೇಶ್ ಕುಟುಕಿದರು.
ತಾಲೂಕಿನ ದೇವಲಾಪುರ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನ ಬಳಿ ಪ್ರದೇಶದಲ್ಲಿ ಶಾಸಕರ ಅನುದಾನದಡಿಯಲ್ಲಿ ಸುಮಾರು 4.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಕಾಮಗಾರಿಗೆ ಮಂಗಳವಾರ ಶಾಸಕ ಗಣೇಶ್ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇವಲಾಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಈ ಸಮುದಾಯ ಭವನದಿಂದ ಇಲ್ಲಿನ ಸರ್ವಸಮುದಾಯದ ಜನತೆಯ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಿದಂತಾಗಲಿದೆ. ಈ ನಿಟ್ಟಿನಲ್ಲಿ 3.30 ಲಕ್ಷ ರೂ. ಶಾಸಕರ ಅನುದಾನ ಹಾಗು 1.50 ಲಕ್ಷ ರೂ.ಗಳ ಹೆಚ್ಚುವರಿ ಅನುದಾನದಡಿಯಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಸಕ್ಕರೆ ಕಾರ್ಖಾನೆ ಜಾಗ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುರೇಶ್‍ಬಾಬು ಹಾಕಿದ್ದ ಬಹಿರಂಗ ಚರ್ಚೆ ಸವಾಲಿಗೆ ಪ್ರತಿಕ್ರಿಯಿಸಿದ ಶಾಸಕ ಗಣೇಶ್, ನಾನು ದಿನದ 24 ಗಂಟೆಯೂ ಕಂಪ್ಲಿಯಲ್ಲೇ ಇರುತ್ತೇನೆ. ಸುರೇಶ್‍ಬಾಬು ಅವರು ಬಳ್ಳಾರಿಯಲ್ಲಿದ್ದು, ಅವರಿಗೆ ಅನುಕೂಲವಾಗುವ ದಿನಾಂಕವನ್ನು ಅವರೇ ನಿರ್ಧರಿಸಿ ಬಹಿರಂಗ ಚರ್ಚೆಗೆ ಬರಲಿ ಎಂದು ಮರುಸವಾಲು ಎಸೆದರು. ಈ ಹಿಂದೆ ಕಂಪ್ಲಿ ಕ್ಷೇತ್ರಕ್ಕೆ 2 ಅವಧಿಗೆ ಸುರೇಶ್‍ಬಾಬು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಅಷ್ಟಾಗಿ ಅಭಿವೃದ್ಧಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಪ್ಲಿ ಕ್ಷೇತ್ರದ ಜನತೆಯಿಂದ ಅವರು ತಿರಸ್ಕೃತಗೊಂಡಿದ್ದಾರೆ. ಆದರೆ, ಮಾಜಿ ಶಾಸಕರಾಗಿ ಹೇಗಿರಬೇಕು ಹಾಗಿರದೇ ಅನಾವಶ್ಯಕ ವಿಚಾರಗಳಲ್ಲಿ ತಲೆದೂರಿಸುತ್ತಿದ್ದಾರೆ. ತಮ್ಮ ಅಧಿಕಾರವಧಿಯಲ್ಲೇ ಬಗೆಹರಿಸಬಹುದಿದ್ದ ವಿವಿಧ ಸಮಸ್ಯೆಗಳನ್ನು ಆಗ ಬಗೆಹರಿಸದೇ ಇದೀಗ ತಮ್ಮ ಸೋದರಮಾವ ಶ್ರೀರಾಮುಲು ಅವರ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರಲ್ಲಿ ಗೊಂದಲ ಮೂಡಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಮಾಜಿ ಶಾಸಕರ ಈ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿಯ ಸರ್ವಾಧಿಕಾರಿ ಆಡಳಿತ ಧೋರಣೆಗೆ ಜನರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಸದ್ಯ ಮಸ್ಕಿ ಸೇರಿದಂತೆ ವಿವಿಧೆಡೆಗಳಲ್ಲಿ ಜರುಗುತ್ತಿರುವ ಉಪಚುನಾವಣೆಗಳಲ್ಲೂ ಸಹ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು ಬಿಜೆಪಿ ಮುಖಭಂಗವಾಗಲಿದೆ ಎಂದು ವಿಶ್ವಾಸ ಹೊರಹಾಕಿದರು.
ಸರ್ಕಾರದ 10 ಕೋಟಿ ರೂ. ಅನುದಾನ ಹಾಗು ಡಿಎಂಎಫ್‍ನ 5 ಕೋಟಿ ರೂ. ಅನುದಾನ ಸೇರಿ ಒಟ್ಟು 15 ಕೋಟಿ ರೂ.ಗಳ ವೆಚ್ಚದಲ್ಲಿ ಕಂಪ್ಲಿ-ಹೊಸಪೇಟೆ ಬೈಪಾಸ್ ರಸ್ತೆ ಮಾರ್ಗದ ಯಲ್ಲಮ್ಮಕ್ಯಾಂಪ್ ಪ್ರದೇಶದ ಬಳಿಯಲ್ಲಿ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿಗೆ ಇದೇ ಏ.5 ಅಥವಾ ಏ.7ರಂದು ಭೂಮಿಪೂಜೆ ನೆರವೇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಲಾಪುರ ಗ್ರಾಪಂ ಉಪಾಧ್ಯಕ್ಷೆ ಪೂಜಾರಿ ಈರಮ್ಮ, ಗ್ರಾಮ ಮುಖಂಡರಾದ ಗೌಡ್ರು ಅಂಜಿನಪ್ಪ, ಗೌಡ್ರ ಸುರೇಶ್‍ಗೌಡ, ಉಮೇಶ್‍ಗೌಡ, ಕರಿಯಪ್ಪ ಗೌಡ, ಗೌಡರ ಬುಡುಗಣ್ಣ, ಕೆ.ವಿರೂಪಾಕ್ಷಪ್ಪ, ಬೂದಿಹಾಳ್ ರವಿಕುಮಾರ್, ಮೆಟ್ರಿ ಗಿರೀಶ್ ಸೇರಿದಂತೆ ಅನೇಕರಿದ್ದರು.