ಸುರೇಶ್‌ ರೈನಾ ಸ್ಥಾನಕ್ಕೆ ಇಂಗ್ಲೆಂಡ್‌ ಸ್ಟಾರ್‌ ಬ್ಯಾಟ್ಸ್‌ಮನ್‌ ಗುರುತಿಸಿರುವ ಚೆನ್ನೈ ಫ್ರಾಂಚೈಸಿ


ನವದೆಹಲಿ, ಸೆ 11 -ಮೂರು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆರಂಭಕ್ಕೂ ಮೊದಲೇ ಎರಡು ಬಹುದೊಡ್ಡ ಆಘಾತಗಳು ಎದುರಾಗಿತ್ತು.

ಮೊದಲಿಗೆ ತಂಡದ ಉಪನಾಯಕ ಸುರೇಶ್‌ ರೈನಾ, ತಮ್ಮ ಕುಟುಂಬದವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಿನ್ನೆಲೆಯಲ್ಲಿ ಸಿಎಸ್‌ಕೆ ಅಭ್ಯಾಸ ಶಿಬಿರ ತೊರೆದು ತಾಯ್ನಾಡಿಗೆ ಹಿಂದಿರುಗಿದರು. ಇದರ ಬೆನ್ನಲ್ಲೇ ಅನುಭವಿ ಆಫ್‌ ಸ್ಪಿನ್ನರ್ ಹರ್ಭಜನ್‌ ಸಿಂಗ್‌ ಕೂಡ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರನಡೆದರು. ಪರಿಣಾಮ ಎಂಎಸ್‌ ಧೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ಗೆ ಬಹುದೊಡ್ಡ ಹಿನ್ನಡೆ ಎದುರಾಗಿದೆ.

ಅಂದಹಾಗೆ ಸೂಪರ್‌ ಕಿಂಗ್ಸ್‌ ತಂಡ ತನ್ನಇಬ್ಬರು ಅನುಭವಿ ಆಗಾರರಿಗೆ ಬದಲಿ ಆಟಗಾರರನ್ನು ಈವರೆಗೆ ಹೆಸರಿಸಿಲ್ಲ. ಇನ್ನು ಐಪಿಎಲ್‌ 2020 ಟೂರ್ನಿಯು ಸೆಪ್ಟೆಂಬರ್‌ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿರುವ ದುಬೈ, ಶರ್ಜಾ ಮತ್ತು ಅಬುದಾಭಿ ಕ್ರೀಡಾಂಗಣಗಳಲ್ಲಿ ಆಯೋಜನೆ ಆಗಲಿದೆ. ಅಬುದಾಭಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ತನ್ನ ಅಭಿಮಾನ ಆರಂಭಿಸಲಿದೆ.

ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಅವರು ಸುರೇಶ್‌ ರೈನಾ ಸ್ಥಾನವನ್ನು ತುಂಬಬಹುದು. ಆದರೆ, ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಸ್ಥಾನ ತುಂಬಲು ಇಂಗ್ಲೆಂಡ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಡೇವಿಡ್‌ ಮಲನ್‌ ಅವರನ್ನು ಗುರುತಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪ್ರಾಥಮಿಕ ಹಂತದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇನ್ನೂ ನಿರ್ಧಾರ ಅಂತಿಮವಾಗಿಲ್ಲ.

“ಈ ವಿಷಯದ ಕುರಿತು ಸದ್ಯ ಚರ್ಚೆ ನಡೆಯುತ್ತಿದೆ, ಆದರೆ ಇನ್ನೂ ಅಂತಿಮವಾಗಿಲ್ಲ. ಡೇವಿಡ್‌ ಮಲನ್‌ ಅದ್ಭುತ ಟಿ20 ಆಟಗಾರರಾಗಿದ್ದಾರೆ. ಸುರೇಶ್‌ ರೈನಾ ಅವರ ರೀತಿ ಮಲನ್ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ. ರೈನಾ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಬೇಕಾ ಅಥವಾ ಮಾಡಬಾರದಾ? ಎಂಬ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಇನ್ನೂ ಅಂತಿಮಗೊಳಿಸಿಲ್ಲ,” ಎಂಬ ಸಿಎಸ್‌ಕೆ ತಂಡದ ಮೂಲಗಳ ಬಗ್ಗೆ ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಿಗೆ 162 ರನ್‌ಗಳನ್ನು ಗಳಿಸಿತ್ತು. ಅದ್ಭುತ ಬ್ಯಾಟಿಂಗ್ ಮಾಡಿದ ಡೇವಿಡ್‌ ಮಲನ್‌ 66 ರನ್‌ಗಳನ್ನು ಚಚ್ಚಿದ್ದರು ಹಾಗೂ ಜೋಸ್‌ ಬಟ್ಲರ್‌ 55 ರನ್ ಸೇರಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್ ತಂಡ ಕೇವಲ ಎರಡು ರನ್‌ಗಳಿಂದ ರೋಚಕ ಜಯ ಸಾಧಿಸಿತ್ತು