ಸುರಕ್ಷಿತ ವಿಧಾನದಲ್ಲಿ ತ್ಯಾಜ್ಯ ನಿರ್ವಹಿಸಿ

ಬೀದರ್: ಜು.29:ಪೌರ ಕಾರ್ಮಿಕರು ಸುರಕ್ಷಿತ ವಿಧಾನದಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕು ಎಂದು ಕರ್ನಾಟಕ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಹಾವಗಿರಾವ್ ಹೇಳಿದರು.

ನಗರದ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ‘ಕಾರ್ಮಿಕರ ಜೀವ ರಕ್ಷಣೆ ನಮ್ಮ ಹೊಣೆ’ ಘೋಷವಾಕ್ಯದಡಿ ಪೌರ ಕಾರ್ಮಿಕರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಅನುಪಯುಕ್ತ ತ್ಯಾಜ್ಯಗಳ ಸಂಗ್ರಹಣೆ, ವಿಲೇವಾರಿ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ಕೋವಿಡ್ ವೇಳೆ ಪ್ರಾಣದ ಹಂಗು ತೊರೆದು ಪೌರ ಕಾರ್ಮಿಕರು ಸಲ್ಲಿಸಿದ ಸೇವೆಯನ್ನು ಮರೆಯಲಾಗದು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ ನುಡಿದರು.

ಕಾರ್ಯಾಗಾರವು ಪೌರ ಕಾರ್ಮಿಕರಿಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದೆ ಎಂದು ಕಾರ್ಮಿಕ ಸಂಘದ ಪವನ್ ಹೇಳಿದರು.

ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಹಣದಲ್ಲಿ ಪೌರ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸುವುದಾಗಿ ಪ್ರಕಟಿಸಿದರು.

ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ, ವಿಜ್ಞಾನ ವಿಭಾಗದ ಸಂಯೋಜಕ ಅನಿಲಕುಮಾರ, ಡಾ. ವಿನೋದ ಕಾಲೇಕರ್ ಇದ್ದರು. 62 ಪೌರ ಕಾರ್ಮಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.