ಸುರಕ್ಷಿತ ತಾಯ್ತತನದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ

ಚಿತ್ರದುರ್ಗ.ಏ.೧೨; ತಾಯಿ ಮರಣ ನಿಯಂತ್ರಿಸಲು ಸಾಂಸ್ಥಿಕ ಹೆರಿಗೆ ಮಾಡಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಎಂದರು.
  ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಸುರಕ್ಷಿತ ಮಾತೃತ್ವ ದಿನದ ಅಂಗವಾಗಿ ಗರ್ಭಿಣಿ ಮಹಿಳೆಯರು ತಾಯಂದಿರಿಗೆ ಸುರಕ್ಷಿತ ತಾಯ್ತನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಯಿಯ ಆರೋಗ್ಯ ಉತ್ತೇಜಿಸಲು ಮತ್ತು ತಾಯಿಯರ ಮರಣ ಕಡಿಮೆ ಮಾಡಲು ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವೆಂದು ಘೋಷಿಸಿತು. ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಏಪ್ರಿಲ್ 11 ರಂದು ಆಚರಿಸಲಾಗುತ್ತದೆ. ಗರ್ಭಿಣಿಗೆ ಹೆರಿಗೆಯ ಮೊದಲು, ಹೆರಿಗೆಯ ಸಮಯದಲ್ಲಿ ಮತ್ತು ನಂತರ ಅಗತ್ಯವಿರುವ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ ಆಚರಣೆ ಮಾಡಲಾಗುತ್ತದೆ ಎಂದರು.
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೆಗೌಡ ಮಾತನಾಡಿ,   ವಿಶ್ವದಾದ್ಯಂತ ಎಲ್ಲ ದೇಶಗಳೂ ಮಾತೃ ಮರಣವನ್ನು ಗಂಭೀರವಾಗಿ ಪರಿಗಣಿಸುತ್ತವೆ. ಕಾರಣ, ಇದು ಆ ದೇಶದ ಆರೋಗ್ಯ ವ್ಯವಸ್ಥೆಯ ಮತ್ತು ಅಭಿವೃದ್ಧಿಯ ಸೂಚ್ಯಂಕವಾಗಿದೆ ಎಂದು ಹೇಳಿದರು.