ಸುರಕ್ಷಿತ ಚಾಲನೆ ತರಬೇತಿ ಕಾರ್ಯಾಗಾರ

ಹುಬ್ಬಳ್ಳಿ,ಜು26: ಸುರಕ್ಷತೆಯ ನಂಬಿಕೆಯಿಂದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಹೇಳಿದ್ದಾರೆ.
ಬಿ.ಆರ್.ಟಿ.ಎಸ್. ಕಂಟ್ರೋಲ್ ರೂಂ ನಲ್ಲಿ ಸಾರಿಗೆ ಸಂಸ್ಥೆಯ ಚಾಲಕರಿಗೆ ಆಯೋಜಿಸಿದ್ದ ಅಪಘಾತ ರಹಿತ ಸುರಕ್ಷಿತ ಚಾಲನೆ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ 15 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದಾರೆ. ಸಂಸ್ಥೆಯ ಚಾಲಕರ ವೃತ್ತಿಪರತೆ ಹಾಗೂ ಸುರಕ್ಷಿತ ಚಾಲನೆಯ ಬಗ್ಗೆ ಸಾರ್ವಜನಿಕರು ವಿಶ್ವಾಸ ಹೊಂದಿದ್ದಾರೆ. ಅದಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಯವರು ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾನಸಿಕ ಸಮತೋಲನ ಮತ್ತು ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡುತ್ತಾ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತಿನಿತ್ಯ ಹಲವಾರು ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಾವು ಅವುಗಳಿಗೆ ಒಗ್ಗಿಕೊಳ್ಳದಿದ್ದಾಗ ನಮ್ಮಲ್ಲಿ ಒತ್ತಡ ಉಂಟಾಗುತ್ತದೆ. ಬದಲಾವಣೆಗಳನ್ನು ಸಕಾರತ್ಮಕವಾಗಿ ಸ್ವೀಕರಿಸಬೇಕು. ಅವುಗಳಿಗೆ ಹೊಂದಿಕೊಳ್ಳಬೇಕು ಮತ್ತು ಮೈಗೂಡಿಸಿಕೊಳ್ಳಬೇಕು. ಕರ್ತವ್ಯವನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು ಅಂದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಹೇಳಿದರು.

ಹುಬ್ಬಳ್ಳಿ ಪೂರ್ವ ಸಂಚಾರ ಠಾಣೆ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಅಪಘಾತ ನಿಯಂತ್ರಣದಲ್ಲಿ ಸಂಚಾರ ನಿಯಮಗಳ ಪಾಲನೆ ಮಹತ್ವ ಕುರಿತು ತಿಳಿಸಿದರು.
ನಿವೃತ್ತ ಮುಖ್ಯ ತಾಂತ್ರಿಕ ಇಂಜಿನಿಯರ್ ಸುಭಾಷ ಚಂದ್ರ ಅವರು ಅಪಘಾತಗಳಿಂದ ಪ್ರಯಾಣಿಕರು, ಸಿಬ್ಬಂದಿ ಹಾಗೂ ಸಂಸ್ಥೆಯ ಮೇಲಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.
ಹಿರಿಯ ಅಧಿಕಾರಿಗಳಾದ ರಾಜೇಶ್ ಹುದ್ದಾರ, ಹೆಚ್. ರಾಮನಗೌಡರ, ನಾರಾಯಣಪ್ಪ ಕುರುಬರ, ಎಸ್.ಎಸ್.ಮುಜುಂದಾರ, ಶಿವಾನಂದ ನಾಗಾವಿ, ರವಿ ಅಂಚಿಗಾವಿ, ಹನುಮನಗೌಡರ ಮತ್ತಿತರರು ಇದ್ದರು.