ಸುರಕ್ಷಿತ ಆಹಾರ ಸೇವನೆಯಿಂದ ಸದೃಢ ಆರೋಗ್ಯ

ಕಲಬುರಗಿ:ಜೂ.9: ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ದವಾದ ಆಕ್ಷಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕವಾಗಿವೆ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ವಿಶ್ವ ಆಹಾರ ಸುರಕ್ಷತಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಾನವನ ದುರಾಸೆಯಿಂದ ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ, ವಿಷಪೂರಿತ ಪದಾರ್ಥಗಳನ್ನು ಬೆರೆಸುತ್ತಿರುವುದು ಅಮಾನವೀಯ ಕೃತ್ಯ ಹಾಗೂ ಅಪರಾದವಾಗಿದೆ. ಇಂತಹ ಆಹಾರವನ್ನು ಸೇವಿಸುವದರಿಂದ ಸಹಜವಾಗಿಯೇ ಆರೋಗ್ಯ ಹಾಳಾಗುತ್ತದೆ. ಆಹಾರದ ಸುರಕ್ಷತೆಗೆ ಸಂಬಂಧಿಸಿದಂತೆ ಅಂಗಡಿ, ಬೇಕರಿ, ಉಪಹಾರ ಗೃಹ, ತಳ್ಳುಗಾಡಿ ಸೇರಿದಂತೆ ಎಲ್ಲರು ಕಾಳಜಿ ವಹಿಸಬೇಕಾದದ್ದು ತುಂಬಾ ಅಗತ್ಯವಾಗಿದೆ. ಕಲೆಬೆರಕೆಯಿಂದ ಕೂಡಿದ, ಎಗ್‍ಮಾರ್ಕ್ ಇರದ, ಪರೀಕ್ಷೆಗೆ ಒಳಪಡದ ವಸ್ತುಗಳಿಂದ ಗ್ರಾಹಕರು ಎಚ್ಚರ ವಹಿಸಬೇಕು. ಸಮತೋಲನೆಯುತ, ಎಲ್ಲಾ ಪೋಷಕಾಂಶಗಳುಳ್ಳ, ಕಲಬೆರಕೆ ರಹಿತ, ಸುರಕ್ಷಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಪ್ರಮುಖರಾದ ಸತೀಶ ಟಿ.ಸಣಮನಿ, ದತ್ತು ಹಡಪದ, ದೇವೇಂದ್ರಪ್ಪ ಗಣಮುಖಿ, ರಾಹುಲ್, ಆದರ್ಶ, ಸಿದ್ದರಾಮ, ಪ್ರದೀಪ, ಪರಮಾನಂದ, ಶ್ರೀಶೈಲ್, ಅನಿತ್ ಸೇರಿದಂತೆ ಇನ್ನಿತರರು ಇದ್ದರು.