ಸುರಕ್ಷಾ ಯೋಜನೆ ಜಾರಿ; ಸದುಪಯೋಗಕ್ಕೆ ಸಂಸದರ ಕರೆ

ದಾವಣಗೆರೆ.ಜೂ.24; ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯು ಜನರ ಅನುಕೂಲಕ್ಕಾಗಿ ಅನೇಕ ಜನ ಸುರಕ್ಷಾ ಯೋಜನೆಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೇ ಜೀವನ ಭದ್ರತೆ ಒದಗಿಸಲು ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರಣ ಇದರ ಸದುಪಯೋಗವನ್ನು ಗ್ರಾಹಕರು ಪಡೆಯಬೇಕೆಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸಲಹೆ ನೀಡಿದರು.ನಗರದ ರೋಟರಿ ಬಾಲಭವನದಲ್ಲಿ ಮಾರ್ಗದರ್ಶಿ ಬ್ಯಾಂಕ್, ದಾವಣಗೆರೆ ಜಿಲ್ಲೆ ಇವರು ಆಯೋಜಿಸಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಇಂತಹ ಹಲವಾರು ಯೋಜನೆಗಳು ಜಾರಿಗೆ ಬಂದಿವೆ ಎಂದು ಮಾಹಿತಿ ನೀಡಿದರು.ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಗೆ ಕೇವಲ ವರ್ಷಕ್ಕೆ 436 ರೂಪಾಯಿ ಕಂತು, 18 ರಿಂದ 70 ವಯಸ್ಸಿನ ಯಾರೂ ಬೇಕಾದರು ವಿಮೆ ಮಾಡಿಸಬಹುದು. ವಿಮೆ ಹೊಂದಿದವರು ನಿಧನರಾದ ಮೇಲೆ ಅವಲಂಬಿತರಿಗೆ 2 ಲಕ್ಷ ಲಭಿಸಲಿದೆ. ಅಲ್ಲದೇ ಪ್ರಧಾನಮಂತ್ರಿ ಜೀವನ್‌ ಸುರಕ್ಷಾ ಯೋಜನೆಗೆ ವರ್ಷಕ್ಕೆ ಕೇವಲ 20 ರೂಪಾಯಿ ಕಂತು, ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ಚಿಕಿತ್ಸೆಗೆ ಸಿಗಲಿದೆ ಎಂದು ಹೇಳಿದರು.ಕೋವಿಡ್‌ನಿಂದ ಮೃತಪಟ್ಟ ಸಾಕಷ್ಟು ಜನರಿಗೆ ಜೀವನ್ ಜ್ಯೋತಿ ಭಿಮಾ ಯೋಜನೆಯಡಿ 2 ಲಕ್ಷ ಲಭಿಸಿದೆ. ಸಾಕಷ್ಟು ಜನರಿಗೆ ಈ ವಿಮೆ ಮಾಡಿಸಿರುವುದೇ ನೆನಪಿರುವುದಿಲ್ಲ, ಅಂತಹ ಸಮಯದಲ್ಲಿ ಈ ಹಣ ಆಪತ್ಕಾಲದಲ್ಲಿ ವರವಾಗಿ ಪರಿಣಮಿಸಿದೆ ಎಂದರು.ಈಗಾಗಲೇ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಜನರು ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಹಾಗೂ 1.38 ಲಕ್ಷ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಜನರು ನೊಂದಣಿ ಮಾಡಿಸಬೇಕಾಗಿದೆ. ಈಗ ಹೊಸದಾಗಿ ಸುಮಾರು 2 ಲಕ್ಷ ಜನರಿಗೆ ಜೀವನ್ ಸುರಕ್ಷಾ ಯೋಜನೆಯಡಿ ಹಾಗೂ ಸುಮಾರು 65 ಸಾವಿರ ಜನರಿಗೆ ಜೀವನ್ ಜ್ಯೋತಿ ಯೋಜನೆಯಡಿ ವಿಮೆ ಮಾಡಿಸಲು ಬ್ಯಾಂಕುಗಳಿಗೆ ಗುರಿ ನಿಗಧಿಪಡಿಸಲಾಗಿದೆ, ಜಿಲ್ಲೆಯ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ದೇಶದಲ್ಲಿ ಬ್ಯಾಂಕಿಂಗ್ ಸೇವೆಗಳಿಂದ ಹೊರಗಿದ್ದ ಜನರನ್ನು ಬ್ಯಾಂಕಿಂಗ್ ವಲಯಕ್ಕೆ ಸೇರಿಸುವ ನಿಟ್ಟಿನಲ್ಲಿ 2014 ರಲ್ಲಿ ಜನ್‌ಧನ್‌ ಆಂದೋಲನ ಪ್ರಾರಂಭವಾಯ್ತು. ಇಲ್ಲಿಯವರೆಗೆ ಈ ದೇಶದ ಸುಮಾರು 49.23 ಕೋಟಿ ಜನರು ಜನಧನ್ ಖಾತೆಗಳನ್ನು ತೆರೆದಿದ್ದಾರೆ. ಇದರಲ್ಲಿ ಸುಮಾರು 27 ಕೋಟಿ ಮಹಿಳೆಯರು ಬ್ಯಾಂಕುಗಳನ್ನು ಜನಧನ್ ಖಾತೆಗಳನ್ನು ತೆರೆದಿರುವುದು ವಿಶೇಷವಾಗಿದೆ. ಜೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲು ತಿಳಿಸಿದ್ದರೂ ಕೂಡ ಈ ದೇಶದ ಜನರು ಸುಮಾರು 2 ಲಕ್ಷ ಕೋಟಿಯಷ್ಟು ಹಣವನ್ನು ಅಕೌಂಟ್‌ಗಳಲ್ಲಿ ಇಟ್ಟಿದಾರೆ ಎಂದು ಮಾಹಿತಿ ನೀಡಿದರು.ಸುಮಾರು 8.5 ಲಕ್ಷ ಬ್ಯಾಂಕ್ ಮಿತ್ರಾ ಪ್ರತಿನಿಧಿಗಳು ಜನರಿಗೆ ಬ್ಯಾಂಕ್ ಶಾಖೆಗಳ ಹೊರತಾಗಿಯೂ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರನ್ನು ಆರ್ಥಿಕವಾಗಿ ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಉದ್ಯೋಗ ಭರವಸೆ ಯೋಜನೆ (ಪಿ.ಎಂ.ಇ.ಜಿ.ಪಿ), ಸ್ಟಾಂಡ್ ಅಪ್ ಯೋಜನೆ, ಸ್ಟಾರ್ಟ್ ಅಪ್ ಯೋಜನೆ, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಈ ತರಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.ಮಾರ್ಗದರ್ಶಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕ ಜಿ.ಸಿ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ವಿವಿಧ ಸವಲತ್ತುಗಳ ಕುರಿತು, ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಈ ವೇಳೆ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್. ಶಿವಪ್ರಸಾದ್, ಎಸ್ ಬಿಐನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಎಮ.ಸೋಮನಾಥ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಪ್ರವೀಣ್ ಪ್ರಭಾಕರ್, ನಬಾರ್ಡ ನ ಡಿಡಿಎಂ ರಶ್ಮಿ ರೇಖಾ, ಡಿಡಿಸಿಸಿ ಬ್ಯಾಂಕಿನ ಸಿಇಒ ತಾವರ್ ನಾಯ್ಕ, ರಾಘವೇಂದ್ರ ನಾಯರಿ ಇತರರು ಇದ್ದರು.