ಸುರಕ್ಷಾ ಕೋವಿಡ್ ರಕ್ಷಣಾ ಪಡೆಗೆ ಡಿಸಿ ರವಿ ಚಾಲನೆ

????????????????????????????????????

ಚಾಮರಾಜನಗರ, ಏ.19- ಕೊರೊನಾ ನಿಯಂತ್ರಣಕ್ಕಾಗಿ ಇರುವ ಕೋವಿಡ್ ಶಿಷ್ಠಾಚಾರ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೇ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ವಿಧಿಸುವುದು ಹಾಗೂ ಕೋವಿಡ್ ಜಾಗೃತಿ ಮೂಡಿಸುವ ಕಾರ್ಯಗಳಿಗಾಗಿ ರೂಪುಗೊಂಡಿರುವ ರಾಜ್ಯದಲ್ಲಿಯೇ ಮೊದಲು ಎನ್ನಬಹುದಾದ ಯುವ ಸುರಕ್ಷಾ ಕೋವಿಡ್ ರಕ್ಷಣಾ ಪಡೆಯ ಕಾರ್ಯಚಟುವಟಿಕೆಗೆ ಚಾಲನೆ ದೊರೆಯಿತು.
ಈಗಾಗಲೇ ವಿಪತ್ತಿನ ಸಂದರ್ಭದಲ್ಲಿ ಪರಿಹಾರ ಕಾರ್ಯಚರಣೆಗೆ ನೆರವಾಗುವ ವಿಶೇಷ ತರಬೇತಿ ಪಡೆದಿರುವ ನೆಹರು ಯುವ ಕೇಂದ್ರದÀ ಯುವ ಜನರÀನ್ನು ಒಳಗೊಂಡ ಯುವ ಸುರಕ್ಷಾ ಕೋವಿಡ್ ರಕ್ಷಣಾ ಪಡೆ ಕೋವಿಡ್ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳಿಗೂ ಸಜ್ಜುಗೊಂಡಿದೆ. ಒಟ್ಟು 13 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರತಿ ಸುರಕ್ಷಾ ಪಡೆಯ ತಂಡದಲ್ಲಿ ವಿಪತ್ತು ಕ್ಷಿಪ್ರಕಾರ್ಯ ಪಡೆಯ ಮೂವರು ಯುವಜನರು, ಒರ್ವ ನಗರಸಭೆ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ 5 ಮಂದಿ ಇರಲಿದ್ದಾರೆ.
ತಮ್ಮದೇ ಆದ ಸಮವಸ್ತ್ರ ಧರಿಸಿ, ಸೀಟಿ ಊದುವ ಮೂಲಕ ಜನಸಂದಣಿ ಸ್ಥಳಗಳು, ಕಲ್ಯಾಣ ಮಂಟಪ, ಸಾರ್ವಜನಿಕ ಸಮಾರಂಭ ಸ್ಥಳಗಳಿಗೆ ಭೇಟಿ ನೀಡಿ ಕೋವಿಡ್ ಶಿಷ್ಠಾಚಾರ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಕಾರ್ಯಾಚರಣೆಗೆ ಸುರಕ್ಷಾ ತಂಡ ಇಳಿಯಲಿದೆ. ಅಲ್ಲದೇ ಕೋವಿಡ್ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳು, ಮಾಸ್ಕ್ ಧರಿಸುವಿಕೆಯ ಮಹತ್ವ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಉಂಟುಮಾಡಲಿದ್ದಾರೆ.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕಳೆದ ಬಾರಿಗೆ ಹೋಲಿಸಿದರೇ ಕಳೆದ 15 ದಿನಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದ್ದರೂ ಜನರಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನ ಭಾವ ಕಾಣುತ್ತಿದ್ದೇವೆ. ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಜೊತೆಯಲ್ಲಿಯೇ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ವಿಪತ್ತು ನಿರ್ವಹಣೆಗೆ ತರಬೇತಿ ಪಡೆದಿರುವ ಐವತ್ತು ಯುವ ಜನರನ್ನು ಸುರಕ್ಷಾ ಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರೊಂದಿಗೆ ಪೊಲೀಸರು, ನಗರಸಭೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಇರಲಿದ್ದಾರೆ ಎಂದರು.
ಕೋವಿಡ್ ಶಿಷ್ಠಾಚಾರ ಉಲ್ಲಂಘನೆ, ಸಭೆ ಸಮಾರಂಭ, ಮದುವೆಗಳಲ್ಲಿ ಮಾರ್ಗಸೂಚಿ ಅನ್ವಯ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಜನರು ಇರುವುದು ಕಂಡುಬಂದಲ್ಲಿ ಸುರಕ್ಷಾ ಪಡೆ ದಂಡ ವಿಧಿಸಲಿದ್ದಾರೆ.
ಜನಸಂದಣಿ ಸ್ಥಳಗಳು, ಹೋಟೆಲ್, ಅಂಗಡಿ-ಮುಂಗಟ್ಟು, ವ್ಯಾಪಾರ, ಉದ್ದಿಮೆ ಸ್ಥಳಗಳು, ದ್ವಿಚಕ್ರ ವಾಹನ, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವ ವೇಳೆ ಮಾಸ್ಕ್ ಧರಿಸದಿರುವವರ ವಿರುದ್ಧ ದಂಡ ಹಾಕಲಿದ್ದಾರೆ. ಅಲ್ಲದೇ ಕೋವಿಡ್ ಮುನ್ನೆಚ್ಚರಿಕೆ ಕುರಿತ ಅರಿವು ಉಂಟು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.