ಸುರಕ್ಷತೆ ನಮ್ಮ ಜವಾಬ್ದಾರಿ

ಬ್ಯಾಡಗಿ, ಮೇ30: ನಮ್ಮ ಅಜಾಗರೂಕತೆ, ನಿರ್ಲಕ್ಷ್ಯತನದಿಂದ ಸೋಂಕು ಹೆಚ್ಚಳವಾಗುತ್ತಿದೆ. ಮಾಸ್ಕ್ ಹಾಕಿದಾಗ ಮಾತ್ರ ಸೋಂಕಿನ ತೀವ್ರತೆ ಕಡಿಮೆ ಆಗಲು ಸಾಧ್ಯ. ನಮ್ಮ ಸುರಕ್ಷತೆ ನಮ್ಮದೇ ಜವಾಬ್ದಾರಿಯಾಗಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಸುಹೀಲ್ ಹರವಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ತಾಲೂಕಿನ 130 ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ನೀಡಿರುವ ಮಾಸ್ಕ್, ಸ್ಯಾನಿಟೈಸರ್, ಕೈಗವಸು ಒಳಗೊಂಡ ಆರೋಗ್ಯ ಕಿಟ್ ಹಾಗೂ ಸೀರೆಗಳನ್ನು ವಿತರಿಸಿ ಮಾತನಾಡಿದ ಅವರು.ಭಾರತಕ್ಕೆ ಎರಡನೇ ಅಲೆಯಿಂದ ಸಮಸ್ಯೆಯಿಲ್ಲವೆಂದು ಹಲವರು ತಪ್ಪು ಭಾವನೆಯಲ್ಲಿದ್ದರು. ಆದರೆ ಎರಡನೇ ಹಂತದ ಅಲೆಯ ಪ್ರಭಾವ ಹೆಚ್ಚಾಗಿ ಅಧಿಕ ಸಾವು,ನೋವುಗಳನ್ನು ಕಾಣುವಂತಾಗಿರುವುದು ಬಹು ದೊಡ್ಡ ದುರಂತ ಎಂದರಲ್ಲದೇ ತಾಲೂಕಿನ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ ಕೊರೋನಾ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕ ಸದಾನಂದ ಚಿಕ್ಕಮಠ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.