ಸುರಕ್ಷತೆ ತಡೆಗೋಡೆ ನಿರ್ಮಿಸಲು ಸಾರ್ವಜನಿಕರ ಒತ್ತಾಯ

ಕೆ.ಆರ್.ಪೇಟೆ. ಜು.13:- ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿಯ ಎರಡೂ ಕಡೆಗಳಿಗೂ ಪ್ರಯಾಣಿಕರ ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಸಾರ್ವ ಜನಿಕರು ಒತ್ತಾಯಿಸಿದ್ದಾರೆ.
ಕೆರೆ ಏರಿಯ ಒಂದು ಭಾಗದಲ್ಲಿ ಮಾತ್ರ ತಡೆಗೋಡೆ ಇದ್ದು ಅದೂ ಸಹ ಗಿಡಗಂಟಿಗಳೊಂದಿಗೆ ಸೇರಿಕೊಂಡು ಕೆಲವು ಕಡೆ ಮುಚ್ಚಿಹೋಗಿರುತ್ತದೆ. ಕಳೆದ 2-3 ವರ್ಷಗಳಿಂದ 5-6 ಅಪಘಾತ ಪ್ರಕರಣಗಳಲ್ಲಿ ಟ್ರಾಕ್ಟರ್, ಗೂಡ್ಸ್ ಆಟೋ, ದ್ವಿಚಕ್ರ ವಾಹನ ಸೇರಿದಂತೆ ಹಲವಾರು ವಾಹನಗಳು 20-25 ಅಡಿ ಆಳವಿರುವ ಕೆರೆ ಏರಿಯ ಕೆಳಗಿನ ಗದ್ದೆಗಳ ಬಳಿಗೆ ಬಿದ್ದಿರುವುದನ್ನು ಗಮನಿಸಬಹುದಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತಿರುವುದರಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ವಾಹನಸವಾರರಿಗೆ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಇನ್ನೊಂದು ಬದಿಗೆ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ವಾಹನ ಸವಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗಿಡಗಂಟಿಗಳ ತೆರವು ಮಾಡಿ.
ದೇವೀರಮ್ಮಣ್ಣಿ ಕೆರೆಯ ಏರಿಯ ಮೇಲಿನ ತ್ಯಾಜ್ಯ ಸೇರಿದಂತೆ ಮಣ್ಣಿನ ರಾಶಿ ಮುಂತಾದುವುಗಳನ್ನು ಕಳೆದ ಎರಡು ದಿನಗಳಲ್ಲಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಚಗೊಳಿಸಲಾಗಿದ್ದು ಕೆರೆಯ ಬದಿ ಇರುವ ಮುಳ್ಳಿನ ಗಿಡಗಳು ಹಾಗೂ ಗಿಡಗಂಟಿಗಳು ರಸ್ತೆಯನ್ನು ಇಣುಕಿ ನೋಡುತ್ತಿದ್ದರೂ ಅವುಗಳನ್ನು ಕಿತ್ತುಹಾಕುವ ಗೋಜಿಗೆ ಹೋಗದೇ ಬೇಕಾಬಿಟ್ಟಿಯಾಗಿ ಕೆಲಸ ಮಾಡಿರುವುದು ಸಾರ್ವಜನಿಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಕೆಲವು ಕಡೆಗಳಲ್ಲಿ ಒಂದು ಮಾರು ಗಿಡಗಂಟಿಗಳು ರಸ್ತೆಗೆ ಬಂದಿವೆ. ಆದ್ದರಿಂದ ಕೂಡಲೇ ಕೆರೆಯ ಏರಿಯ ಮೇಲೆ ಕೆರೆಯ ಬದಿ ಇರುವ ದೊಡ್ಡದೊಡ್ಡ ಗಿಡಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.