ಸುರಕ್ಷತೆ ಜತೆಗೆ ಅಡುಗೆ ಮನೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಿ

ಕೋಲಾರ,ಜ,೧೩- ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳೇ ಎಂದು ಪರಿಗಣಿಸಿ, ಅಡುಗೆ ಮನೆಯಲ್ಲಿ ಸುರಕ್ಷತೆಯ ಜತೆಗೆ ಶುಚಿತ್ವ ಕಾಪಾಡಿಕೊಳ್ಳಿ, ಕಳಪೆ ಆಹಾರಧಾನ್ಯ ಸರಬರಾಜಾದರೆ ತಿರಸ್ಕರಿಸಿ,ಮಕ್ಕಳ ಅರೋಗ್ಯ ಬಗ್ಗೆ ಕಾಳಜಿ ವಹಿಸಿ ಎಂದು ಮಧ್ಯಾಹ್ನ ಉಪಹಾರ ಯೋಜನೆ ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಹ್ಮಣ್ಯಂ ಕರೆ ನೀಡಿದರು.
ತಾಲ್ಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲ್ಲಿ ತಾಪಂ,ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ( ಮಧ್ಯಾಹ್ನ ಉಪಹಾರ) ಯೋಜನೆಯಡಿ ನರಸಾಪುರ,ಅರಾಭಿಕೊತ್ತನೂರು,ಬೆಳಮಾರನಹಳ್ಳಿ, ಸೂಲೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಬಿಸಿಯೂಟ ಸಿಬ್ಬಂದಿಗೆ ೨೦೨೨-೨೩ನೇ ಸಾಲಿನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಟ್ಟಾರೆ ಮಕ್ಕಳ ಆರೋಗ್ಯ ಕಾಪಾಡುವುದು ಶಿಕ್ಷಕರ ಜತೆಗೆ ಅಡುಗೆ ಸಿಬ್ಬಂದಿಯ ಜವಾಬ್ದಾರಿಯಾಗಿದೆ, ಶಾಲೆಯ ಅಡುಗೆ ಮನೆ ನಿಮ್ಮ ಮನೆಯ ಅಡುಗೆ ಮನೆ ಎಂದೇ ಭಾವಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ, ಅಡುಗೆ ಮನೆಯಲ್ಲಿ ಜೇಡರ ಬಲೆ, ಹಲ್ಲಿ, ಇಲಿ,ಹೆಗ್ಗಣಗಳು ಇರದಂತೆ ಎಚ್ಚರವಹಿಸಿ ಎಂದು ಕಿವಿಮಾತು ಹೇಳಿದರು.
ಸರ್ಕಾರ ಸಿರಿಧಾನ್ಯಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಜಾಥಾವನ್ನು ಜಿಲ್ಲಾ ಕೇಂದ್ರಗಳಲ್ಲಿ ಇತ್ತೀಚೆಗೆ ನಡೆಸಿದೆ, ಇದರ ಉದ್ದೇಶ ಸಿರಿಧಾನ್ಯಗಳಿಂದಾಗುವ ಪ್ರಯೋಜನಗಳನ್ನು ಆಧರಿಸಿದೆ, ಸರ್ಕಾರಿ ಶಾಲೆಗಳ ಮಕ್ಕಳಿಗೂ ಸಿರಿಧಾನ್ಯಗಳನ್ನು ಒದಗಿಸುವ ಚಿಂತನೆಯೂ ಇದೆ ಎಂದರು.
ಬಿಸಿಯೂಟ ಸಿಬ್ಬಂದಿಗೆ ವಿಮೆ ಸೌಲಭ್ಯ,ಸುರಕ್ಷತೆ ಕುರಿತು ಮಾಹಿತಿ ನೀಡಿದg ಅವರು, ಗುಣಮಟ್ಟದ ಆಹಾರಧಾನ್ಯ, ತರಕಾರಿ ಬಳಸಿ, ಶುದ್ದ ನೀರು ಅಡುಗೆಗೆ ಮತ್ತು ಮಕ್ಕಳ ಕುಡಿಯುವ ನೀರಿಗಾಗಿ ಬಳಸಿ ಎಂದು ಸೂಚಿಸಿದರು.
ರುಚಿಕರ ಮತ್ತು ಪೌಷ್ಟಿಕಾಂಶಭರಿತ ಆಹಾರ ಮಕ್ಕಳಿಗೆ ಕೊಡುವ ಕಾರ್ಯ ಇಲಾಖೆ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಮಕ್ಕಳನ್ನು ಸೇರಿಸಬೇಡಿ ಎಂದು ಸೂಚಿಸಿದರು.
ಶಾಲೆಗಳಿಗೆ ಅಗತ್ಯ ಆಹಾರಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ಒದಗಿಸಲಾಗುತ್ತಿದೆ, ದಾಸ್ತಾನು ಸದಾ ಪರಿಶೀಲಿಸಿಕೊಳ್ಳಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಅಡುಗೆಗೆ ಬಳಸಿ ಎಂದರು.
ಸಿಆರ್‌ಪಿ ಗೋವಿಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಸಿಯೂಟ ಸಿಬ್ಬಂದಿಗೆ ಆಹಾರ ಧಾನ್ಯ ಬಳಸಿ ಬಿಸಿ,ರುಚಿಯಾದ ಆಹಾರ ತಯಾರಿಕೆ ವಿಧಾನ, ಶುಚಿತ್ವ ಮತ್ತು ಅಡುಗೆ ಮನೆ ನಿರ್ವಹಣೆಯ ಜವಾಬ್ದಾರಿಗಳ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡುತ್ತಿದ್ದು, ಇದನ್ನು ಶಾಲೆಗಳಲ್ಲಿ ಅನುಸರಿಸಿ ಎಂದ ಅವರು ಅಡುಗೆ ಅನಿಲ್ ಬಳಕೆ ಹಾಗೂ ಮುಂಜಾಗೃತ ಕ್ರಮಗಳನ್ನು ವಿವರಿಸಿದರು
ದೈಹಿಕ ಶಿಕ್ಷಕ ಸೊಣ್ಣೇಗೌಡ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಗೋಪಿನಾಥ್, ಎಸ್‌ಡಿಎಂಸಿ ಸದಸ್ಯ ಮಂಜುನಾಥ್, ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯ ಹೇಮಂತ್ ಮತ್ತಿತರರಿದ್ದರು.