ಸುರಕ್ಷತಾ ಕ್ರಮಗಳನ್ನು ಪಾಲಿಸದ ಉದ್ದಿಮೆಗಳನ್ನು ಮುಚ್ಚಬೇಕಾಗುತ್ತದೆ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ ಜು. 17: ಉದ್ದಿಮೆಗಳು ತಮ್ಮ ವ್ಯಾಪ್ತಿಯಲ್ಲಿ ಸುರಕ್ಷತಾ ಕ್ರಮ (ಎಸ್.ಓ.ಪಿ.) ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇವುಗಳನ್ನು ಪಾಲಿಸದ ಉದ್ದಿಮೆಗಳನ್ನು ನಿರ್ದಾಕ್ಷಣ್ಯವಾಗಿ ಮುಚ್ಚಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫಾರ್ಮಾ ಮತ್ತು ರಬ್ಬರ ಆಯಿಲ್ ತಯ್ಯಾರಿಕಾ ಘಟಕಗಳ ಮಾಲೀಕರು ಮತ್ತು ವ್ಯವಸ್ಥಾಪಕರೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದರು.

ಕೆಲವು ದಿನಗಳ ಹಿಂದೆ ಸ್ಯೂಟಿಕ್ ಲ್ಯಾಬ್ ಕೆಮಿಕಲ್ ಪ್ರಾವೆಟ್ ಲಿಮಿಟೆಡ್ ಹುಮನಾಬಾದನಲ್ಲಿ ಗ್ಯಾಸ್ ಲಿಕೇಜ್ ಆಗಿ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮೂರು ಜನರಿಗೆ ಆಸ್ಪತ್ರೆಗೆ ಸೇರಿಸಲಾಯಿತು. 2019ರಲ್ಲಿಯೂ ಇಂತಹ ಘಟನೆ ನಡೆದಿತ್ತು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಉದ್ದಿಮೆದಾರರು ಎಸ್.ಓ.ಪಿ. ಸುರಕ್ಷಾ ಕ್ರಮಗಳನ್ನು ತಮ್ಮ ಉದ್ದಿಮೆಗಳ ವ್ಯಾಪ್ತಿಯಲ್ಲಿ ಪಾಲನೆ ಮಾಡಬೇಕು. ಇವುಗಳನ್ನು ಪಾಲನೆ ಮಾಡದೇ ನಿಷ್ಕಾಳಜಿ ವಹಿಸಿದರೆ ಇಂತಹ ಘಟನೆಗಳು ಸಂಭವಿಸುತ್ತವೆ. ಮುಂದಿನ ಒಂದು ತಿಂಗಳೊಳಗಾಗಿ ತಮ್ಮ ಉದ್ದಿಮೆಗಳಿಗೆ ಭೇಟಿ ನೀಡಿ ತಾವು ಪಾಲಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುತ್ತದೆ, ಒಂದು ವೇಳೆ ಈ ನಿಯಮಗಳನ್ನು ಪಾಲಿಸದ ಕಂಪನಿಗಳು ಮುಚ್ಚಬೇಕಾಗುತ್ತದೆ ಅಂದು ತಾವು ಯಾವುದೇ ನೆಪ ಹೇಳಿದರು ನಾವು ಕೇಳುವುದಿಲ್ಲ ಎಂದು ಹೇಳಿದರು.

ತಮ್ಮ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅವರ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಅವರಿಗೆ ಕೌಶಲ್ಯ ತರಬೇತಿಗಳನ್ನು ನೀಡಿ ತುರ್ತು ಸಂದರ್ಭದಲ್ಲಿ ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುವ ಕುರಿತು ಅವರಿಗೆ ಮಾಹಿತಿ ನೀಡಬೇಕು. ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣವೇ ಸಂಬಂಧಿಸಿದ ಪೊಲೀಸ್ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಅಧಿಕಾರಿಗಳು ಹಾಗು ಜಿಲ್ಲಾಡಳಿತಕ್ಕೆ ತಕ್ಷಣ ಮಾಹಿತಿ ನೀಡಬೇಕು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು ಎಂದು ಹೇಳಿದರು.

ತಮ್ಮ ಉದ್ದಿಮೆಯ ಅಕ್ಕ ಪಕ್ಕದ ಗ್ರಾಮಗಳ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕ್ರಮವಹಿಸಬೇಕು ಮತ್ತು ತಮ್ಮ ಉದ್ದಿಮೆಯಿಂದ ಬಿಡುಗಡೆಯಾಗುವ ವೇಸ್ಟೇಜ್‍ನ್ನು ಮನಬಂದಂತೆ ಎಸೆಯಬಾರದು, ಈ ಹಿಂದೆ ಅದನ್ನು ಹಳ್ಳದಲ್ಲಿ ಎಸೆದಿರುವುದರಿಂದ ಆ ನೀರಿನಲ್ಲಿಯ ಮೀನುಗಳು ಮತ್ತು ಇತರೆ ಜಾನುವಾರುಗಳು ಸತ್ತು ಹೋಗಿರುವ ದೂರು ಬಂದಿರುತ್ತವೆ. ಮುಂದೆ ಇಂತಹ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಉದ್ದಿಮೆಗಳ ಮಾಲೀಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು, ಇದು ಕೇವಲ ಸಭೆ ಅಲ್ಲ ಎಚ್ಚರಿಕೆಯ ಸಭೆ ಯಾರು ನಿರ್ಲಕ್ಷ ವಹಿಸುವಂತಿಲ್ಲ ಎಂದು ಬೀದರ ಜಿಲ್ಲೆಯ ಉದ್ದಿಮೆದಾರರಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ಕರೆ ನೀಡಿದರು.

ಉದ್ದಿಮೆಗಳ ಜಂಟಿ ನಿರ್ದೇಶಕರು ಹುಬ್ಬಳ್ಳಿಯ ರವೀಂದ್ರನಾಥ ರಾಠೋಡ ಅವರು ಮಾತನಾಡಿ ಒಂದು ಉದ್ದಿಮೆಯನ್ನು ಒಬ್ಬ ಮನುಷ್ಯ ನಿಯಂತ್ರಿಸಲು ಆಗಲ್ಲ ಇದಕ್ಕೆ ಒಂದು ಸಿಸ್ಟಮ್ ನಿರ್ಮಿಸಿ ಕಾರ್ಮಿಕರಿಗೆ ಜವಾಬ್ದಾರಿ ನೀಡಿದರೆ ಅವರು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಾರೆ, ಪ್ಯಾಕ್ಟರಿ ಒಳಗಡೆ ಮತ್ತು ಹೊರಗಡೆ ಏನಾದರೂ ಆದರೆ ಮುಂಜಾಗ್ರತಾ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮುಂಜಾಗ್ರತೆ ಇರಬೇಕು ಮತ್ತು ಚೆಕ್ ಲಿಸ್ಟ್‍ಗಳಲ್ಲಿರುವ ಎಲ್ಲಾ ಮಾಹಿತಿಗಳನ್ನು ತಿಳಿದು ಅನುಷ್ಠಾನಕ್ಕೆ ತರಬೇಕು. ತಮ್ಮ ಸಮಸ್ಯೆಗಳೆನಾದರೂ ಇದ್ದರೆ ನಮ್ಮ ಗಮನಕ್ಕೆ ಹಾಗೂ ಸಂಬಂಧಿಸಿದವರ ಗಮನಕ್ಕೆ ತರಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಯಾವುದನ್ನು ಮುಚ್ಚಿಡಲು ಆಗುವುದಿಲ್ಲ ಹಾಗಾಗಿ ಯಾವುದೇ ಘಟನೆ ಮುಚ್ಚಿಡದೇ ತಕ್ಷಣ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರೆ ಅಲ್ಲಿ ನಮಗೆ ಪರಿಹಾರ ಸಿಗುತ್ತದೆ ಹಾಗಾಗಿ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸುರೇಖಾ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗೋಪಾಲಕೃಷ್ಣ, ಬೀದರ ಜಿಲ್ಲೆಯ ಉದ್ದಿಮೆಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.