ಸುಯೋಗ್ ಆಸ್ಪತ್ರೆಯಲ್ಲಿ ಅಂತರ ರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ

ಮೈಸೂರು,ಮೇ.12:-ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ಶೂಶ್ರೂಷಕರ ಪ್ರತಿನಿಧಿಯಾಗಿ, ನರ್ಸಿಂಗ್ ವೃತ್ತಿಯನ್ನು ವಿಶ್ವದಲ್ಲೇ ಗುರುತಿಸುವಂತೆ ಮಾಡುವ ಮೂಲಕ ಎಂದಿಗೂ ನೆನಪಿನಲ್ಲಿ ಉಳಿಯುವವರು ಪ್ಲಾರೆನ್ಸ್ ನೈಂಟಿಗೇಲ್ ಎಂದು ಬ್ಯುಸಿನೆಸ್ ಡೆವಲಪ್ ಮೆಂಟ್ ಎಟ್ ಗ್ರೂಪ್ ಫಾರ್ಮಾಸ್ಯೂಟಿಕಲ್ಸ್ ಉಪಾಧ್ಯಕ್ಷ ಡಾ.ಸುನೀಲ್ ಚಿಪ್ಳುಣ್ಕರ್ ಬಣ್ಣಿಸಿದರು.
ಅವರಿಂದು ಸುಯೋಗ್ ಆಸ್ಪತ್ರೆ ವತಿಯಿಂದ ಸುಯೋಗ್ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ `ಅಂತರ ರಾಷ್ಟ್ರೀಯ ಶುಶ್ರೂಷಕರ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶುಶ್ರೂಷಕರು ನಾಯಕತ್ವವನ್ನು ವಹಿಸುವವರು, ಸಾಕಷ್ಟು ಶಿಸ್ತು, ಸಂಯಮವನ್ನು ಅಳವಡಿಸಿಕೊಂಡಿರುವವರು ಎಂದರು. ಫ್ಲಾರೆನ್ಸ್ ನೈಟಿಂಗೇಲ್ ಉತ್ತಮ ಹಿನ್ನೆಲೆಯುಳ್ಳವರು. ಆದರೂ ಅವರು ನರ್ಸಿಂಗ್ ಕ್ಷೇತ್ರಕ್ಕೆ ಬಂದು ನರ್ಸಿಂಗ್ ವೃತ್ತಿಯನ್ನು ಗುರುತಿಸುವಂತೆ ಮಾಡಿದವರು. ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಂಡವರು. ಪ್ರತಿಯೊಬ್ಬ ನರ್ಸಿಂಗ್ ವಿದ್ಯಾರ್ಥಿಗಳೂ ಕೂಡ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ಮಯೋಗಿ ಗಳಾಗಬೇಕು ಎಂದು ಅಲ್ಲಿನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸುಯೋಗ್ ಆಸ್ಪತ್ರೆಯ ಸ್ಥಾಪಕಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ ಪ್ಲಾರೆನ್ಸ್ ನೈಟಿಂಗೇಲ್ ಶುಶ್ರೂಷಕರ ಕ್ಷೇತ್ರಕ್ಕೆ ವೈಜ್ಞಾನಿಕ ನೋಟವನ್ನು ಕೊಟ್ಟಂತಹ ಮಹಿಳೆ ಎಂದು ತಿಳಿಸಿದರು. ಇಂದು ಪ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನ. ಪ್ರಪಂಚದಾದ್ಯಂತ ಶುಶ್ರೂಷಕರನ್ನು ಗೌರವಿಸತಕ್ಕಂತದ್ದು, ಅವರ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸತಕ್ಕಂತದ್ದು, ಶುಶ್ರೂಷಕಿಯರ ಜವಾಬ್ದಾರಿಗಳನ್ನು ಅವರಿಗೆ ಅರಿವು ಮಾಡಿಕೊಡತಕ್ಕಂತದ್ದು, ಹುದ್ದೆಯ ಘನತೆ, ಗೌರವವನ್ನು ಕಾಪಾಡಿಕೊಳ್ಳತಕ್ಕಂತಹ ರೀತಿಯಲ್ಲಿ ಪ್ರಪಂಚದಾದ್ಯಂತ ಅರಿವನ್ನು ಮೂಡಿಸುವ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಅದೇ ರೀತಿ ಸುಯೋಗ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿಯೂ ಎರಡು ವರ್ಷಗಳಿಂದ ಶುಶ್ರೂಷಕರ ದಿನವನ್ನು ಆಚರಿಸುತ್ತಿದ್ದೇವೆ . ಎರಡು ವರ್ಷದಿಂದ ನರೆ?ಸಿಂಗ್ ಆರಂಭವಾಗಿದ್ದು ವಿದ್ಯಾರ್ಥಿಗಳು ಚೆನ್ನಾಗಿ ತರಬೇತಿ ಪಡೆಯುತ್ತಿದ್ದಾರೆ. ಪ್ಲಾರೆನ್ಸ್ ನೈಟಿಂಗೇಲ್ ಅವರು ಶುಶ್ರೂಷಕರ ಕ್ಷೇತ್ರಕ್ಕೆ ನಾಯಕತ್ವವನ್ನು, ಕರುಣಾಮಯ ವ್ಯಕ್ತಿತ್ವವನ್ನು, ಸಮರ್ಪಣಾ ಮನೋಭಾವನ್ನು ಬಿಟ್ಟುಹೋಗಿದ್ದಾರೆ. 18ನೇಶತಮಾನದ ಅರ್ಧದಲ್ಲಿದ್ದ ಮಹಿಳೆ ವಿವಾಹವಾಗದೇ ಇದೇ ಕ್ಷೇತ್ರದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು 90ವರ್ಷಗಳ ಕಾಲ ಬದುಕಿ ಇವತ್ತು ಶುಶ್ರೂಷಕರ ಕ್ಷೇತ್ರಕ್ಕೆ ವೈಜ್ಞಾನಿಕ ನೋಟವನ್ನು ಕೊಟ್ಟಂತಹ ಮಹಿಳೆ. ಅವರ ಎಲ್ಲ ಮೌಲ್ಯಗಳನ್ನು ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬ ತಿಳುವಳಿಕೆ ನೀಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಡಿ ಡಾ.ರಾಮೇಗೌಡ, ಸಿಇಒ .ಡಾಆರ್.ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷೆ ಡಾ. ಸೀಮಾ ಯೋಗಣ್ಣ, ಆಡಳಿತ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ನರ್ಸಿಂಗ್ ಸೂಪರಿಂಟೆಂಡೆಂಟ್ ಉತ್ರಿಯಾ ಮೇರಿ, ಪ್ರಾಂಶುಪಾಲರಾದ ನಾಗಮಣಿ ಟಿ ಉಪಸ್ಥಿತರಿದ್ದರು.