ಸುಯೇಜ್ ಕಂಪನಿ ವಿರುದ್ಧ ಕ್ರಮಕ್ಕೆಆಗ್ರಹಿಸಿ ಲೋಕಾಯುಕ್ತಕ್ಕೆ ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ: ಜಲಸಿರಿ ಯೋಜನೆಯ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್’ ಕಂಪನಿ ಮೇಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಲೋಕಾಯುಕ್ತರ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಮನವಿ ಸಲ್ಲಿಸಿದ್ದಾರೆ.ಇದೇ ವೇಳೆ ಮಾತನಾಡಿದ ಟಿ. ಅಸ್ಗರ್ ಅವರು, ದಾವಣಗೆರೆ ನಗರಕ್ಕೆ ನಿತ್ಯ ೭೭೦ ಲಕ್ಷ ಲೀಟರ್ (೭೭ ಎಂ.ಎಲ್.ಡಿ) ನೀರು ಅಗತ್ಯವಿದೆ. ೨೦೪೬ಕ್ಕೆ ನಗರದ ಜನಸಂಖ್ಯೆ ಎಷ್ಟಾಗಬಹುದು ಎಂದು ಅಂದಾಜಿಸಿ, ನಿತ್ಯ ೧,೫೭೦ ಲಕ್ಷ ಲೀಟರ್ ನೀರು ಪೂರೈಸುವ ಪರಿಕಲ್ಪನೆಯೊಂದಿಗೆ ೪೭೨.೨೦ ಕೋಟಿ ರೂ., ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಯ ಟೆಂಡರ್‌ನ್ನು ಪಡೆದ ಸುಯೇಜ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ೨೦೧೮ರ ಮೇ ತಿಂಗಳಿನಲ್ಲಿ ಕಾಮಗಾರಿ ಆರಂಭಿಸಿತ್ತು. ೨೦೨೨ರ ಜನವರಿಗೆ ಮುಗಿಸಬೇಕಿತ್ತು. ಆದರೆ, ಇದುವರೆಗೂ ಪೂರ್ಣಗೊಳಿಸದೆ ಸಾಕಷ್ಟು ಕೆಲಸಗಳು ಬಾಕಿ ಇವೆ ಸುಯೇಜ್ ಕಂಪನಿ ವಿರುದ್ಧ ಹರಿಹಾಯ್ದರು.ನೀರು ಶುದ್ಧೀಕರಣ ಘಟಕದಿಂದ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿಯ ವ್ಯಾಪ್ತಿ ೭೦.೩೫ ಕಿ.ಮೀ. ಇದ್ದು, ಇದರಲ್ಲಿ ಕೂಡ ಅನೇಕ ಕಾಮಗಾರಿ ಬಾಕಿ ಉಳಿದಿದೆ.  ಓವರ್‌ಹೆಡ್ ಟ್ಯಾಂಕ್‌ಗಳಿಂದ ಮನೆಗಳಿಗೆ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ವ್ಯಾಪ್ತಿ ೧,೩೩೯ ಕಿ.ಮೀ ಇದ್ದು, ಇದರಲ್ಲಿ ಕೂಡ ಆನೇಕ ಕಾಮಗಾರಿ ಬಾಕಿ ಉಳಿದಿದೆ ಎಂದರು.