ಸುಮಿತ್ರಾ ಪ್ರತಿನಿಧಿಗೆ ಹರಿದಾಸ ಅನುಗ್ರಹ ಪ್ರಶಸ್ತಿ

ಕಲಬುರಗಿ:ಫೆ.3: ನಗರದ ದಾಸಸಾಹಿತ್ಯ ಸಂಶೋಧಕರಾದ ಶ್ರೀಮತಿ ಸುಮಿತ್ರಾ ಜಯತೀರ್ಥ ಪ್ರತಿನಿಧಿ ಅವರು ಬೆಂಗಳೂರಿನ ಶ್ರೀ ಶ್ರೀನಿವಾಸ ಬಳಗ ಕೊಡಮಾಡುವ `ಹರಿದಾಸ ಅನುಗ್ರಹ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಫೆ. 9ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಉತ್ತರಾದಿ ಮಠದ ಆವರಣದಲ್ಲಿ ನಡೆಯಲಿರುವ ಶ್ರೀ ಪುರಂದರದಾಸರ ಆರಾಧನಾ ಉತ್ಸವದ ಸಮಾರಂಭದಲ್ಲಿ ಸುಮಿತ್ರಾ ಪ್ರತಿನಿಧಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷರಾದ ವಾದಿರಾಜ ತಾಯಲೂರು ಹಾಗೂ ದಾಸಸೌರಭ ಟ್ರಸ್ಟ್‍ನ ಅಧ್ಯಕ್ಷರಾದ ಪಾಂಡುರಂಗರಾವ ಕಂಪ್ಲಿ ತಿಳಿಸಿದ್ದಾರೆ.
ಸುಮಿತ್ರಾ ಪ್ರತಿನಿಧಿ ಅವರು ಕಲಬುರಗಿಯ ಮಹಿಳಾ ಭಜನಾ ಮಂಡಳಿಯ ಸದಸ್ಯೆಯಾಗಿದ್ದು, ಅನೇಕ ವರ್ಷಗಳಿಂದಲೂ ದಾಸಸಾಹಿತ್ಯ ಅಧ್ಯಯನ, ಸಂಶೋಧನೆ, ಹರಿನಾಮ ಭಜನೆ, ಸಂಕೀರ್ತನೆ, ಸುಳಾದಿ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.