ಸುಮಲತಾಗೆ ಮೇಲ್ಮನೆ ಟಿಕೆಟ್

(ಸಂಜೆವಾಣಿ ಪ್ರತಿನಿಧಿಯಿಂದ)

ಬೆಂಗಳೂರು,ಮೇ೩೧;ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂ. ೧೩ ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕೆಪಿಎಸ್‌ಸಿಯ ಮಾಜಿ ಸದಸ್ಯ ಎಂ. ನಾಗರಾಜ್ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿರೋಧ ಪಕ್ಷದ ಸಚೇತಕ ರವಿಕುಮಾರ್ ಅವರಿಗೆ ವಿಧಾನಪರಿಷತ್‌ನ ಸದಸ್ಯರಾಗುವ ಭಾಗ್ಯ ಒಲಿದಿದೆ.ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ. ಇಂದು ಸಂಜೆಯೊಳಗೆ ಈ ಮೂವರ ಹೆಸರನ್ನು ಬಿಜೆಪಿ ವರಿಷ್ಠರು ಪ್ರಕಟಿಸುವರು ಎಂದು ಬಿಜೆಪಿಯ ಮೂಲಗಳೂ ಹೇಳಿವೆ.ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ತಮಗೆ ರಾಜ್ಯರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರಾದರೂ ಬಿಜೆಪಿ ಹೈಕಮಾಂಡ್ ಇವರಿಗೆ ವಿಧಾನ ಪರಿಷತ್‌ನ ಟಿಕೆಟ್ ನೀಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಕ್ಕೆ ಪರಿಷತ್ ಸ್ಥಾನವನ್ನು ಬಳುವಳಿಯಾಗಿ ನೀಡಿದೆ.ಉಳಿದಂತೆ ಕೆಪಿಎಸ್‌ಸಿಯ ಮಾಜಿ ಸದಸ್ಯ ಕುರುಬ ಸಮುದಾಯದ ಎಂ. ನಾಗರಾಜ್ ಅವರಿಗೆ ಟಿಕೆಟ್ ನೀಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮುದಾಯದವರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನವನ್ನು ತಣಿಸುವ ಪ್ರಯತ್ನ ನಡೆಸಿ ಕುರುಬ ಸಮುದಾಯವನ್ನು ಓಲೈಸುವ ಪ್ರಯತ್ನವನ್ನು ಬಿಜೆಪಿ ವರಿಷ್ಠರು ಮಾಡಿದ್ದಾರೆ.ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ರವಿಕುಮಾರ್ ಅವರನ್ನು ಮುಂದುವರೆಸಬೇಕು ಎಂಬ ಒತ್ತಡಕ್ಕೆ ಮಣಿದಿರುವ ಬಿಜೆಪಿ ನಾಯಕರು ರವಿಕುಮಾರ್ ಅವರಿಗೆ ಮತ್ತೆ ಟಿಕೆಟ್ ನೀಡಿದ್ದಾರೆ. ವಿಧಾನ ಪರಿಷತ್‌ನ ಬಲಾಬಲದ ಪ್ರಕಾರ ಬಿಜೆಪಿಗೆ ೩ ಸ್ಥಾನಗಳು ಸಿಗಲಿದ್ದು, ಈ ಮೂರೂ ಸ್ಥಾನಗಳಿಗೆ ೧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಾಲ್ಕೈದು ದಿನಗಳ ಹಿಂದೆ ನಡೆದಿದ್ದ ಕೋರ್‌ಕಮಿಟಿ ಸಭೆಯಲ್ಲಿ ಸುಮಾರು ೭-೮ ಜನರ ಹೆಸರಿನ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದು, ಅಂತಿವಾಗಿ ಹೈಕಮಾಂಡ್ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್, ರವಿಕುಮಾರ್ ಹಾಗೂ ಎಂ. ನಾಗರಾಜ್ ಅವರಿಗೆ ಅಭ್ಯರ್ಥಿಯನ್ನಾಗಿಸುವ ತೀರ್ಮಾನ ಮಾಡಿದ್ದು, ಇಂದು ಸಂಜೆಯ ಒಳಗೆ ಅಧಿಕೃತವಾಗಿ ಹೆಸರುಗಳು ಪ್ರಕಟವಾಗಲಿದೆ.