“ಸುಮನ” ಕಥಾ ಸಂಕಲನ ಬಿಡುಗಡೆ

ಅಥಣಿ :ಜು.14: ದಾಂಪತ್ಯ ಬದುಕಿನ ಬಗೆಗೆ ಮಧುರವಾದ ಅಕ್ಷರಗಳನ್ನು ಪೆÇೀಣಿಸುವುದು ಬಹಳ ಸುಲಭ. ಆದರೆ ನಿಜ ಜೀವನದಲ್ಲಿ ನಡೆಸುವ ಪ್ರಯೋಗಗಳು ಸೂಕ್ಷ್ಮವಾಗಿರಬೇಕು, ಕೆಲವೊಮ್ಮೆ ಸಂಭವಿಸುವ ಕ್ಷುಲ್ಲಕ ತಪ್ಪುಗಳೂ ಮಧುರತೆಯ ಹಾದಿಯಲ್ಲಿ ಮುಳ್ಳಾಗಿ ಚುಚ್ಚುತ್ತವೆ. ಆದ್ದರಿಂದ ಸಂಸಾರದಲ್ಲಿ ಸತಿಪತಿಗಳು ಗೌರವ,ಪ್ರೀತಿ, ಸ್ನೇಹದಿಂದ ಬದುಕಿದಾಗ ದಾಂಪತ್ಯ ಜೀವನ ಸುಮಧುರವಾಗುತ್ತದೆ ಎಂದು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಸಾಹಿತಿ ಸುಷ್ಮಾ ಶಂಕರ ಡವಳೇಶ್ವರ ಅವರ ಚೊಚ್ಚಲು ಕೃತಿ
” ಸುಮನ” ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಒಂದು ಕುಟುಂಬದಲ್ಲಿ ಸತಿಪತಿಗಳು ಇಬ್ಬರು ಸಮಾನರು, ಹೆಂಡತಿ ಗಂಡನ ಗುಲಾಮಳಲ್ಲ , ಗಂಡ ಹೆಂಡತಿಯ ಅಡಿಯಾಳಲ್ಲ ಎಂಬುದನ್ನು ಅರಿತು ಪರಸ್ಪರ ಹೊಂದಾಣಿಕೆಯ ಮೂಲಕ ಜೀವನ ನಡೆಸಿದಾಗ ಬದುಕು ಸುಂದರವಾಗುತ್ತದೆ ಎಂಬುದನ್ನು ಈ ಕಥಾ ಸಂಕಲನದಲ್ಲಿ ಬಿಂಬಿಸಲಾಗಿದೆ. ಸುಷ್ಮಾ ಶಂಕರ ಡವಳೇಶ್ವರ ಅವರು ಮೂಲತಃ ಮರಾಠಿ ಲೇಖಕಿಯಾಗಿದ್ದರೂ ಕೂಡ ಹಿಂದಿ ಭಾಷೆಯಲ್ಲಿ ಪ್ರಥಮವಾಗಿ ತಮ್ಮ ಕೃತಿಯನ್ನು ಹೊರತಂದಿದ್ದಾರೆ. ಮುಂಬರುವ ದಿನಗಳಲ್ಲಿಯೂ ಕೂಡ ಕನ್ನಡ ಭಾಷೆಯಲ್ಲಿ ಅವರ ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯುವ ಧುರೀಣ ಚಿದಾನಂದ ಸವದಿ ಮಾತನಾಡಿ ಸಂಸಾರ ಎಂಬ ಬಂಡೆ ಸುಗಮವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎಂಬ ಜೋಡಿ ಎತ್ತುಗಳು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕು. ಆಧುನಿಕತೆ ಬೆಳೆದಂತೆ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಒತ್ತಡದ ಬದುಕಿನಲ್ಲಿ ಸತಿಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಎಂಬುದು ಬಹಳ ಮುಖ್ಯ. ಸಂಸಾರದಲ್ಲಿ ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸದಿಂದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಮಹಿಳಾ ಸಾಹಿತಿ ಸುಷ್ಮಾ ಶಂಕರ ಡವಳೇಶ್ವರ ಅವರು ತಮ್ಮ ಕಥಾ ಸಂಕಲನದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ, ಇನ್ನಷ್ಟು ಕೃತಿಗಳು ಹೊರಬರಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕ ಎ ಬಿ ಪಾಟೀಲ ಮಾತನಾಡಿದರು. ಈ ವೇಳೆ ಶಂಕರ ಮತ್ತು ಸುಷ್ಮಾ ಡವಳೇಶ್ವರ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜಶೇಖರ ಟೊಪಗಿ, ಧರೇಪ್ಪ ಬಸಗೌಡರ , ಮಹೇಶ ಚೌಗಲಾ, ಶ್ರೀಕಾಂತ ಅಸ್ಕಿ, ಭಾರತಿ ಡವಳೇಶ್ವರ, ದುಂಡಪ್ಪ ಪಡಸಲಗಿ, ಪುಂಡಲೀಕ ತಾoವಶಿ, ಭಾರತಿ ಅಲಿಬಾದಿ, ಅಪ್ಪಾಸಾಬ ನಾಯಿಕ, ಬಿ ವೈ ಹೊಸಕೇರಿ ಇನ್ನಿತರರು ಉಪಸ್ಥಿತರಿದ್ದರು. ಶ್ರೀಕಾಂತ ಅಸ್ಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಚಿದಾನಂದ ಡವಳೇಶ್ವರ ನಿರೂಪಿಸಿದರು. ರಾಜಶೇಖರ ಟೋಪಗಿ ವಂದಿಸಿದರು.