ಸುಮನಹಳ್ಳಿ ಮೇಲ್ಸೇತುವೆ ದುರಸ್ತಿ

ಬೆಂಗಳೂರು, ಸೆ.೨೨- ರಾಜಧಾನಿ ಬೆಂಗಳೂರಿನ ಸುಮ್ಮನಹಳ್ಳಿಯ ಮೇಲ್ಸೇತುವೆಯ ನಿರ್ವಹಣೆಯ ಲೋಪದಿಂದ ಮತ್ತೆ ದೊಡ್ಡ ಪ್ರಮಾಣದ ಗುಂಡಿ ಬಿದ್ದ ಹಿನ್ನೆಲೆ ಬಿಬಿಎಂಪಿ ಇಂದಿನಿಂದ ದುರಸ್ತಿ ಕಾಮಗಾರಿ ಆರಂಭಿಸಿದೆ.
ಗುಂಡಿ ಬಿದ್ದಿರುವ ಇಡೀ ಸ್ಲಾಯಬ್ ಕತ್ತರಿಸಿ ತೆಗೆದು ಅಲ್ಲಿಗೆ ಮತ್ತೆ ಕಬ್ಬಿಣದ ಸರಳುಗಳನ್ನು ಜೋಡಿಸಿ ಕಾಂಕ್ರಿಟ್ ಹಾಕಿ ರಿಪೇರಿ ಮಾಡುವ ಕಾರ್ಯ ನಡೆಯುತ್ತಿದೆ ಕಾಮಗಾರಿ ಪೂರ್ಣವಾಗಲು ಸುಮಾರು ೭೫ರಿಂದ ೯೦ ದಿನ ಕಾಲಾವಕಾಶ ಬೇಕಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗರಬಾವಿಯಿಂದ ಡಾ. ರಾಜಕುಮಾರ್ ಸಮಾಧಿ ಕಡೆ ಕಡೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದಿತ್ತು. ಸದ್ಯ ಸುಮಾರು ೩/೩ ಅಡಿ (೯ ಚದರ ಅಡಿ) ಗುಂಡಿ ನಿರ್ಮಾಣವಾಗಿದ್ದು, ಮೇಲ್ಸೇತುವೆಗೆ ಅಳವಡಿಸಲಾದ ಕಬ್ಬಿಣದ ಸರಳು ದರ್ಶನವಾಗುತ್ತಿದ್ದವು.ಹೀಗಾಗಿ, ಸಂಚಾರಿ ಪೊಲೀಸರು ಗುಂಡಿಯ ಸುತ್ತ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಕಳೆದ ೨೦೦೪-೦೬ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೇಲ್ಸೇತುವೆ ನಿರ್ಮಿಸಿ ೨೦೧೪-೧೫ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು.ಆದರೆ ಸೂಕ್ತ ನಿರ್ವಹಣೆ ಮಾಡಬೇಕಿದ್ದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇ ಪದೆ ಫ್ಲೈಓವರ್‌ನಲ್ಲಿ ಗುಂಡಿ ಕಾಣಿಸಿಕೊಳ್ಳುತ್ತಿವೆ.
ಅಲ್ಲದೆ, ಕಳೆದ ೨೦೧೯ರ ನವೆಂಬರ್‌ನಲ್ಲಿಯೂ ಇದೇ ಮಾರ್ಗದಲ್ಲಿ ಮತ್ತು ಕಳೆದ ಬಾರಿ ಗುಂಡಿ ಬಿದ್ದಿರುವ ಸಮೀಪದಲ್ಲಿಯೇ ಮತ್ತೆ ಗುಂಡಿ ಸೃಷ್ಟಿಯಾಗಿದೆ.
ಅಲ್ಲಲ್ಲಿ ಸಂಚಾರ ದಟ್ಟಣೆ: ಫ್ಲೈಓವರ್‌ನಲ್ಲಿ ಗುಂಡಿ ಬಿದ್ದ ಕಡೆ ಕಾಮಗಾರಿ ನಡೆಯುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯ ವಾಹನಗಳು ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸುತ್ತಿವೆ. ಇದರಿಂದ ಸುಮ್ಮನಹಳ್ಳಿ ಜಂಕ್ಷನ್‌ನಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ.
ಒಂದು ವೇಳೆ ಫ್ಲೈಓವರ್ ಮೇಲೆ ವಾಹನ ಸಂಚಾರ ನಿಷೇಧಿಸಿದರೆ ಸುಮ್ಮನಹಳ್ಳಿ ಜಂಕ್ಷನ್, ಕಂಠೀರವ ನಗರ ಹಾಗೂ ಕೊಟ್ಟಿಗೆಪಾಳ್ಯ ಸೇರಿದಂತೆ ವಿವಿಧ ಕಡೆ ಭಾರೀ ಸಂಚಾರಿ ದಟ್ಟಣೆ ಉಂಟಾಗಲಿದೆ.