ಸುಭಾಷ್ ಚಂದ್ರಬೋಸ್ ರ 125ನೇ ಜನ್ಮ ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.12: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮ ವಾರ್ಷಿಕದ ಸಂದರ್ಭದಲ್ಲಿ ನೇತಾಜಿಯವರ ” ರಾಣಿ ಝಾನ್ಸಿ ರೆಜಿಮೆಂಟ್” ಸ್ಥಾಪನಾ ದಿನದ ನೆನಪಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ( ಎ. ಐ. ಎಂ. ಎಸ್.ಎಸ್) ವತಿಯಿಂದ ಮಹಿಳೆಯರ ಮೆರವಣಿಗೆ ಹಾಗೂ ಗಾಂಧಿಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೂರಾರು ಮಹಿಳೆಯರು ನೇತಾಜಿಯವರ ಭಾವಚಿತ್ರಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ  ಸಾಗಿದರು.
ನಂತರ ಗಾಂಧಿಭವನದಲ್ಲಿ ನಡೆದ ಸ್ಫೂರ್ತಿ ಸಭೆಯಲ್ಲಿ ಮಕ್ಕಳ ತಜ್ಞರಾದ ಡಾ. ಯೋಗಾನಂದ ರೆಡ್ಡಿ ವೈ.ಸಿ ರವರು ಮಾತನಾಡುತ್ತಾ, “ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಸಂಧಾನತೀತ ಪಂಥದ ಅಗ್ರಗಣ್ಯ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಶೋಷಿತ – ಮರ್ದಿತ ಜನತೆಯ ಸ್ಪೂರ್ತಿಯ ಸೆಲೆಯಾಗಿದ್ದರು. ಚಿಕ್ಕಂದಿನಿಂದಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ನೇತಾಜಿ, ತಾವು ಓದುತ್ತಿದ್ದ ಮಿಷನರಿ ಶಾಲೆ ಮತ್ತು ಅಲ್ಲಿನ ವಾತಾವರಣ ಪರದೇಶಿ ಎನಿಸುತ್ತಿದ್ದ ಕಾರಣ, ಆ ಪುಟ್ಟ ಗುಂಡಿಗೆಯಲ್ಲೂ ಬಂಡಾಯದ ಕಿಡಿ ಹೊಗೆಯಾಡುತ್ತಿತ್ತು. ಆ ಸಂಕಲ್ಪದಿಂದಲೇ ವಿದ್ಯಾಭ್ಯಾಸದ ನಂತರ ಅವರು ಐಸಿಎಸ್ ಪದವಿಗೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಆಂದೋಲನದಲ್ಲಿ ಪಾಲ್ಗೊಳ್ಳಲು ಧುಮುಕಿದರು. ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಶಸ್ತ್ರ ಸಮರ ಸಾರಲು ಇಂಡಿಯನ್ ನ್ಯಾಷನಲ್ ಆರ್ಮಿ ಯನ್ನು ಸಜ್ಜುಗೊಳಿಸಿ ಅದರಲ್ಲಿ  ವಿಶೇಷವಾಗಿ ತರಬೇತಿ ಪಡೆದ ಮಹಿಳಾ ಯೋಧೆಯರ ಪಡೆ  ಸುಪ್ರಸಿದ್ಧ “ರಾಣಿ ಝಾನ್ಸಿ ರೆಜಿಮೆಂಟ್” ಅನ್ನು ಸ್ಥಾಪಿಸಿದರು. ಇಂತಹ ಮಹಾನ್ ವ್ಯಕ್ತಿಯ 125 ಜನ್ಮ ವಾರ್ಷಿಕದ ಸಂದರ್ಭದಲ್ಲಿ ಅವರ ವಿಚಾರಗಳನ್ನು ಎಲ್ಲೆಡೆ ಕೊಂಡೊಯ್ಯಲು ಎ.ಐ.ಎಂ.ಎಸ್.ಎಸ್ ವರ್ಷದಾದ್ಯಂತ  ಹಲವಾರು ಕಾರ್ಯಕ್ರಮ ಚಟುವಟಿಕೆಗಳನ್ನು ಮಾಡುತ್ತಿರುವುದು ಹರ್ಷದಾಯಕ ವಿಷಯ. ಸಾಂಸ್ಕೃತಿಕವಾಗಿ ಪದನವಾಗುತ್ತಿರುವ ಇಂದಿನ ಕಾಲದಲ್ಲಿ ಇಂತಹ ಮಹಾನ್ ವ್ಯಕ್ತಿಯ ವಿಚಾರಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.
ನಂತರ ಎ.ಐ.ಎಂ.ಎಸ್.ಎಸ್. ನ ರಾಜ್ಯ ಉಪಾಧ್ಯಕ್ಷರಾದ ಎಂ.ಎನ್. ಮಂಜುಳಾ ರವರು ಮಾತನಾಡಿ, ” ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಕಾಲವದು. ಮಹಿಳೆಯರು ಸಂಘಟನೆ, ರಾಜಕೀಯ ಚಟುವಟಿಕೆ, ಬಹಿರಂಗ ಸಭೆ –  ಮೆರವಣಿಗೆಗಳಲ್ಲಿ ಭಾಗವಹಿಸುವುದರ ಕುರಿತು ಬಿನ್ನಾಭಿಪ್ರಾಯಗಳಿದ್ದವು. ಅವರು ಕ್ರಾಂತಿಕಾರಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಊಹಿಸಲು ಅಸಾಧ್ಯವಾದ ಮಾತಾಗಿತ್ತು. ಹೀಗಿರುವಾಗ, ಮಹಿಳೆಯರೂ ಪುರುಷರಿಗೆ ಸರಿಸಮಾನರು ಎಂದು ಸಾಬೀತುಪಡಿಸುವ ದಿಕ್ಕಿನಲ್ಲಿ ಮಹಿಳಾ ಯೋಧೆಯರ ಪಡೆ “ರಾಣಿ ಝಾನ್ಸಿ ರೆಜಿಮೆಂಟ”ನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಐಎಂಎಸ್ಎಸ್ ನ ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷೀಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಶ್ರೀಮತಿ ಈಶ್ವರಿಯವರು ವಹಿಸಿಕೊಂಡಿದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ವರ್ಣಂಜಲಿ ನೇತಾಜಿಯವರ ಏಕಪಾತ್ರಾಭಿನಯ, ಪಾಲಾಕ್ಷಿ ಹಾಗೂ ತಂಡದವರಿಂದ ಪ್ರಗತಿಪರ ಹಾಡುಗಳು, ಶ್ರೀ ಗೋವಿಂದಪ್ಪ ಸರ್ ಅವರಿಂದ ಕಾವ್ಯ ಕುಂಚ,  ಲಾ ಕಾಲೇಜ್ ವಿದ್ಯಾರ್ಥಿನಿಯರು ಹಾಡನ್ನು ಪ್ರಸ್ತುತಪಡಿಸಿದರು.
ಜಂಟಿ ಕಾರ್ಯದರ್ಶಿಗಳಾದ ರೇಖಾ ಹಾಗೂ ವಿದ್ಯಾವತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಗಳ, ಬಡಾವಣೆಗಳ ಮಹಿಳೆಯರು, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.