ಸುಭಾಷ್ ಗುತ್ತೇದಾರ್ ಪುತ್ರನ ವಿರುದ್ಧ ಫೋರ್ಜರಿ ಆರೋಪಕಂಟ್ರಾಕ್ಟರ್ ಸಂತೋಷ್ ಲೈಸನ್ಸ್ ಕಪ್ಪುಪಟ್ಟಿಗೆ ಸೇರಿಸಿ; ಬಿ.ಆರ್

ಕಲಬುರಗಿ:ಮಾ.6: ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ ಸಂತೋಷ್ ಗುತ್ತೇದಾರ್ ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ (ಕೆಬಿಜೆಎನ್‍ಎಲ್) ಯಾವುದೇ ಕಾಮಗಾರಿ ಕೈಗೊಳ್ಳದೆಯೂ ನಕಲಿ ವರ್ಕ್‍ಡನ್ ಸರ್ಟಿಫಿಕೇಟ್ ಪಡೆದು ಕೋಟ್ಯಂತರ ರೂ. ಟೆಂಡರ್ ಗಿಟ್ಟಿಸಲು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಗಂಭೀರ ಆರೋಪ ಮಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸುಮಾರು ರೂ. 22 ಕೋಟಿ ಅಂದಾಜು ಮೊತ್ತದ ಟೆಂಡರ್ ಗಿಟ್ಟಿಸುವ ಸಲುವಾಗಿ ಗುತ್ತೇದಾರ್ ಕೆಬಿಜೆಎನ್‍ಎಲ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ರೂ.10.99 ಕೋಟಿಯ ನಕಲಿ ವರ್ಕ್‍ಡನ್ ಸರ್ಟಿಫಿಕೆಟ್ ಲಗತ್ತಿಸಿ ಸರಕಾರಕ್ಕೆ ವಂಚಿಸಿದ್ದಾರೆ ಎಂದು ಟೀಕಿಸಿದರು.

ಸಂತೋಷ್ ಗುತ್ತೇದಾರ್ ತಾವು ಶಾಸಕರ ಪುತ್ರ ಎಂಬ ಪ್ರಭಾವ ಬಳಸಿಕೊಂಡು ಹೀಗೆ ಬಹಿರಂಗವಾಗಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಹಾಗಾಗಿ, ಈ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮುಂದೆ ಯಾವುದೇ ಗುತ್ತಿಗೆ ಕಾಮಗಾರಿ ದೊರೆಯದಂತೆ ಲೈಸನ್ಸ್ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇದೇ ಮಾರ್ಚ್ 2ರಂದು ತಾವು ದೂರು ಸಲ್ಲಿಸಿರುವುದಾಗಿ ಹೇಳಿದರು.

ಈವರೆಗೆ ಸರಕಾರದ ವಿವಿಧ ಇಲಾಖೆಗಳ ಕಂಟ್ರಾಕ್ಟಿಂಗ್ ಪಡೆಯುವ ಸಲುವಾಗಿ ಎದುರಿನ ಗುತ್ತಿಗೆದಾರರ ಮೇಲೆ ಒತ್ತಡ ಹೇರುವುದು, ಬೆದರಿಕೆ ಹಾಕುವುದನ್ನು ಮಾಡುತ್ತಿದ್ದ ಗುತ್ತೇದಾರ್, ಈಗ ನೇರವಾಗಿ ನಕಲಿ ವರ್ಕ್‍ಡನ್ ಸರ್ಟಿಫಿಕೆಟ್ ಸಿದ್ದಪಡಿಸುವ ದಂಧೆ ನಡೆಸುತ್ತಿದ್ದಾರೆ ಎಂದರು.

ಈ ಮಧ್ಯೆ, ಕಂಟ್ರಾಕ್ಟರ್ ಸಂತೋಷ್ ಗುತ್ತೇದಾರ್ ಅವರಿಗೆ ಯಾವುದೇ ವರ್ಕ್‍ಡನ್ ಸರ್ಟಿಫಿಕೆಟ್ ನೀಡಿಲ್ಲ ಎಂದು ಸ್ವತಃ ಕೆಬಿಜೆಎನ್‍ಎಲ್ ಅಧಿಕಾರಿಗಳು ಲಿಖಿತವಾದ ಉತ್ತರ ನೀಡಿದ್ದಾರೆ. ಹಾಗಾಗಿ, ಸಂತೋಷ್ ಅವರಿಗೆ ಇಂಥದ್ದೊಂದು ವರ್ಕ್‍ಡನ್ ಸರ್ಟಿಫಿಕೆಟ್ ಎಲ್ಲಿಂದ ಬಂತು ಎಂಬುದರ ತನಿಖೆ ಆಗಬೇಕೆಂದು ಪಾಟೀಲ್ ಒತ್ತಾಯಿಸಿದರು.

ಮಲ್ಲಿಕಾರ್ಜುನ ಪೂಜಾರಿ, ಖೇಮ್‍ಸಿಂಗ್ ರಾಠೋಡ್ ಮತ್ತು ಗಣೇಶ್ ಪಾಟೀಲ್ ಉಪಸ್ಥಿತರಿದ್ದರು.


ಮಾಡಾಳ ಬೆನ್ನಿಗೆ ನಿಂತ ಸರಕಾರ

ಮಗನ ಮೂಲಕ ಕೋಟ್ಯಂತರ ರೂ. ಡೀಲ್ ಕುದುರಿಸುವ ದಂಧೆ ನಡೆಸುತ್ತಿದ್ದ ಶಾಸಕ ವಿರೂಪಾಕ್ಷಪ್ಪ ಮಾಡಾಳ ಎಲ್ಲಿದ್ದಾರೆ ಎಂಬುದು ರಾಜ್ಯ ಸರಕಾರ ಮತ್ತು ಪೊಲೀಸರಿಗೆ ಗೊತ್ತಿದೆ. ಉದ್ದೇಶಪೂರ್ವಕವಾಗಿ ಮಾಡಾಳ ಅವರನ್ನು ಬಂಧಿಸದೆ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಟೀಕಿಸಿದರು.

ಸರಕಾರವೇ ಶಾಸಕ ವಿರೂಪಾಕ್ಷಪ್ಪ ಬೆನ್ನಿಗೆ ನಿಂತಿದೆ. ಹೀಗಿರುವಾಗ ಪೊಲೀಸರು ಅದು ಹೇಗೆ ಶಾಸಕರನ್ನು ಬಂಧಿಸಲು ಮುಂದಾಗುತ್ತಾರೆ ಹೇಳಿ ಎಂದು ಪಾಟೀಲ್ ಪ್ರಶ್ನಿಸಿದರು.

ವಿರೂಪಾಕ್ಷಪ್ಪ ಮಾಡಾಳ ಪ್ರಕರಣ ನಾಚಿಕೆಗೇಡಿತನದ್ದು. ಯಾವ ಮುಖ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಾರೋ ಗೊತ್ತಾಗುತ್ತಿಲ್ಲ ಎಂದು ಛೇಡಿಸಿದರು.


ಶಾಸಕ ಸುಭಾಷ್ ಗುತ್ತೇದಾರ್ ತೀರಾ ಇತ್ತೀಚೆಗೆ ಮಸೀದಿಯಲ್ಲಿ ಮುಸ್ಲಿಂ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈಗ ನೋಡಿದರೆ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ರಾಜಕಾರಣ ಮಾಡೋದು ಸರಿಯಲ್ಲ.

-ಬಿ.ಆರ್.ಪಾಟೀಲ್, ಮಾಜಿ ಶಾಸಕರು