ಸುಭದ್ರ ಸರಕಾರಕ್ಕೆ ಕಡ್ಡಾಯ ಮತದಾನ ಮಾಡಿ: ಇಒ ಪಾಟೀಲ

ಬಸವಕಲ್ಯಾಣ: ಎ.7:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ.10 ರಂದು ನಡೆಯುವ ಚುನಾವಣೆ ನಿಮಿತ್ಯ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ ಹೇಳಿದರು.

ತಾಲೂಕಿನ ಮುಡಬಿ ಗ್ರಾಮದಲ್ಲಿ ಗುರುವಾರ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಭದ್ರವಾದ ಸರಕಾರ ರಚನೆಯಾಗಬೇಕಾದರೆ 18 ವರ್ಷದ ಮೇಲ್ಪಟ್ಟ ಯುವಕರು, ಯುವತಿಯರು, ವೃದ್ಧರು, ವಿಕಲ ಚೇತನರು ಸೇರಿದಂತೆ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೆ ಮತದಾನದ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕು ಎಂದರು.

ಒಂದು ವೇಳೆ ನೀವು ಮತದಾನ ಮಾಡದೆ ಇದ್ದಲ್ಲಿ, ನಿಮ್ಮನ್ನು ನೀವು ಮೋಸ ಮಾಡಿಕೊಂಡತೆ, ಹೀಗಾಗಿ ಅದಕ್ಕೆ ಆಸ್ಪದ ಕೊಡದೆ ಅಂದು ಮತದಾನ ಮಾಡಿ ಮತ್ತು ನಿಮ್ಮ ಮನೆಯ ಅಕ್ಕ ಪಕ್ಕದ ಜನರಿಗೂ ಮತದಾನ ಉದ್ದೇಶ ಹಾಗೂ ಮಹತ್ವ ಕುರಿತು ತಿಳಿಸುವ ಮೂಲಕ ಮತದನಾ ಮಾಡಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರಾz (ನರೇಗಾ) ಸಂತೋಷ ಚವ್ಹಾಣ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಹಾಗೂ ಬೆದರಿಕೆಗೆ ಅಂಜದೆ ದೈರ್ಯದಿಂದ ನಿಮ್ಮ ಮತದಾನ ಹಕ್ಕು ಚಲಾಯಿಸಬೇಕು ಮತ್ತು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆದಲ್ಲಿ ತಪ್ಪದೆ ನಮ್ಮ ಗಮನಕ್ಕೆ ತನ್ನಿ ಮೇಲಾಕಾರಿಗಳ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಮತದಾನದ ಕುರಿತು ಶ್ಲೋಗನ್‍ದೊಂದಿಗೆ ಗ್ರಾಮದ ಪ್ರಮುಖ ವೃತ್ತಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ರಸ್ತೆ ಉದ್ದಕ್ಕೂ ನಿಂತ ಸಾರ್ವಜನಿಕರಿಗೆ ಮೇ.10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಕಾರಿ ಮಹಾಂತೇಶ, ಗ್ರಾಮ ಪಂಚಾಯತ ಕಾರ್ಯದರ್ಶಿ ಅಶೋಕ ಉಚ್ಛೇಕರ, ತಾಲೂಕು ಐಇಸಿ ಸಂಯೋಜಕ ವೀರಾರೆಡ್ಡಿ, ಡಿಇಒ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದರು.