
ಲಕ್ಷ್ಮೇಶ್ವರ, ಏ.7: ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಮತದಾರರ ಪಾತ್ರ ಮುಖ್ಯವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಲು ಮತದಾನ ಮಹತ್ವದ್ದಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ ಬಡಗೇರ ಅವರು ಹೇಳಿದರು.
ಲಕ್ಷ್ಮೇಶ್ವರ ತಾಲೂಕು ಚುನಾವಣೆ ಸ್ವೀಪ್ ಸಮಿತಿ ಹಾಗೂ ಗೊಜನೂರ ಗ್ರಾಮ ಪಂಚಾಯತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆ ಪಾತ್ರ ಮಹತ್ವದ್ದಾಗಿದೆ. ಉತ್ತಮ ಭವಿಷ್ಯ ರೂಪಿಸುವ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಎಲ್ಲ ಅರ್ಹ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು. ಮತದಾರ ಜಾಗೃತಿ ಆಗದಿದ್ದರೆ ದೇಶದ ಭವಿಷ್ಯ ಸರಿಯಾದ ದಿಕ್ಕಿನಲ್ಲಿ ಸಾಗುವುದಿಲ್ಲ. ಜನರಿಂದ ಜನರಿಗಾಗಿ ಸರಕಾರವಿದ್ದು, ಸರಕಾರ ಆಯ್ಕೆ ಮಾಡುವ ಹಕ್ಕು ಜನರಿಗೆ ನೀಡಲಾಗಿದೆ.
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಮತನಾಡಿ, ಮೇ 10ರಂದು ವಿಧಾನಸಭೆ ಸಾರ್ವತ್ರಿಕ ಚುನಾವಣೆಯಿದ್ದು, ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಅನ್ಯ ಸ್ಥಳದಲ್ಲಿ ವಾಸವಿರುವ ಗ್ರಾಮದ ಜನರಿಗೂ ತಿಳಿಹೇಳಿ ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುವಂತೆ ತಿಳಿಸಲಾಯಿತು. ನಂತರ ಎಲ್ಲ ಕೂಲಿಕಾರ್ಮಿಕರಿಗೂ ಮತದಾರನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಎಫ್. ಮಾಳವಾಡ, ಕಾರ್ಯದರ್ಶಿ ಶರಬಸಪ್ಪ ಮೇಟಿ, ಟಿಎಂಐಎಸ್ ಚಂದ್ರಶೇಖರ ಹಳ್ಳಿ, ಬಿಎಫ್‍ಟಿ, ಜಿಕೆಎಂ ಗ್ರಾಮ ಪಂಚಾಯತಿ ಇತರರಿದ್ದರು.