ಸುಬ್ರತಾಗೆ ಬಿಜೆಪಿ ಟಿಕೆಟ್


ನವದೆಹಲಿ.ಮಾ೨೪: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತನ್ನ ತಂತ್ರಗಾರಿಕೆಯನ್ನು ಮುಂದುವರೆಸಿರುವ ಬಿಜೆಪಿ, ಪ್ರಸ್ತುತ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಮತ್ತು ಸ್ಕೂಲ್ ಆಫ್ ಮಿಲಿಟರಿ ಅಫೇರ್ಸ್ ನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರನ್ನು ರಾಶ್‌ಬೆಹರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಮಂಗಳವಾರ ೧೩ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ೧೯೯೮ ರಿಂದ ಟಿಎಂಸಿ ಭದ್ರಕೋಟೆಯಾಗಿರುವ ರಾಶ್‌ಬೆಹರಿ ಕ್ಷೇತ್ರದಲ್ಲಿ ನಿವೃತ್ತ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ಸುಬ್ರತಾ ಸಹಾ ಅವರಿಗೆ ಟಿಕೆಟ್ ನೀಡಿದೆ.
ನಿವೃತ್ತಿಯ ನಂತರ, ಸಹಾ ಅವರು ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ತಯಾರಕ ಸಂಸ್ಥೆಯ ಸಂಸ್ಥಾಪಕ ಮಹಾ ನಿರ್ದೇಶಕರಾಗಿದ್ದರು ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಪರಮ ವಿಶಿಷ್ಠ ಸೇವಾ ಪದಕ ಪಡೆದ ಸಹಾ ಅವರನ್ನು ರಾಷ್ಟ್ರೀಯ ಭದ್ರತೆಯ ಪರಿಣಿತರೆಂದು ಬಿಜೆಪಿಯಲ್ಲಿ ಪ್ರಶಂಸಿಸಲಾಗಿದೆ.