ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ರಮಣ ನೇಮಕ

ನವದೆಹಲಿ, ಏ. ೬- ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ. ಎನ್.ವಿ. ರಮಣ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಾಗಿರುವ ಎಸ್.ಎ. ಬೊಬ್ಡೆ ಅವರು ಏ. ೨೩ ರಂದು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಆಂಧ್ರಮೂಲದ ಹಿರಿಯ ನ್ಯಾಯಮೂರ್ತಿ ರಮಣ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಆದೇಶಿಸಿದ್ದಾರೆ.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಸ್ತುತ ನ್ಯಾಯಮೂರ್ತಿಗಳಲ್ಲಿ ಹಿರಿಯರಾದ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಮುಂದಿನ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೋರಿದ್ದರು.
ಈ ಶಿಫಾರಿಸ್ಸಿನ ಅನ್ವಯ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುಪ್ರೀಂ ಕೋರ್ಟ್‌ನ ಮುಂದಿನ ನ್ಯಾಯಮೂರ್ತಿಗಳಾಗಿ ಎಂ.ವಿ. ರಮಣ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
೧೯೫೭ರ ಆಗಸ್ಟ್ ೨೭ ರಂದು ಜನಿಸಿರುವ ನ್ಯಾಯಮೂರ್ತಿ ಎಂ.ವಿ. ರಮಣ ಅವರು ೨೦೨೨ರ ಆಗಸ್ಟ್ ೨೬ರವರೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.