ಸುಪ್ರೀಂ ಆದೇಶ ಗಾಯದ ಮೇಲೆ ಬರೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨೧:ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬೇಕೆಂಬ ದುರುದ್ದೇಶ ನಮಗಿಲ್ಲ. ರಾಜ್ಯದಲ್ಲಿ ಮಳೆ ಕೊರತೆ ಇದ್ದರೂ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಲು ರಾಜ್ಯಸರ್ಕಾರ ವಿಫಲವಾಗಿದೆ ಸಂಕಷ್ಟದ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯಸರ್ಕಾರದ ವೈಫಲ್ಯ ಇದೆ ಎಂದ ಅವರು, ತಮಿಳುನಾಡು ನೀರು ಕೇಳುವ ಮುಂಚೆಯೇ ಜೂನ್‌ನಿಂದಲೇ ನೀರು ಬಿಟ್ಟಿದ್ದೇಕೆ ಡಿಎಂಕೆ ಬೆದರಿಕೆ ಹಾಕಿರಬಹುದಾ ಕಾಂಗ್ರೆಸ್ ಹೈಕಮಾಂಡ್ ಒತ್ತಡವಿತ್ತಾ ಎಂಬ ಸಂಶಯವೂ ಇದೆ ಎಂದರು.
ನೀರು ಬಿಟ್ಟು ಪಂಚಾಯ್ತಿ ಕರೆಯುವಂತೆ ಸರ್ವ ಪಕ್ಷ ಸಭೆ ಕರೆದಿದ್ದೀರಿ, ನೀರು ಬಿಟ್ಟ ಮೇಲೆ ಸಂಸದರ ಸಭೆ ಕರೆದು ಬೇಡಿಕೆ ಇಟ್ಟಿದ್ದೀರಿ, ಕಾಂಗ್ರೆಸ್‌ನ ರಾಜಕೀಯ ನಿರ್ಣಯಗಳಿಗೆ ಕರ್ನಾಟಕವನ್ನು ಬಲಿಪಶು ಮಾಡಲಾಗಿದೆ ಎಂದು ಸಿ.ಟಿ ರವಿ ದೂರಿದರು.