ಸುಪ್ರೀಂ ಅಧಿಕಾರ ನಿಯಂತ್ರಣಕ್ಕೆಸಂಸತ್ ಅಸ್ತು

ಜೆರುಸಲೇಂ (ಇಸ್ರೇಲ್), ಜು.೨೫- ವಿಪಕ್ಷ ಸಂಸದರ ವಿರೋಧ, ಆಕ್ಷೇಪ ಹಾಗೂ ಕಲಾಪಕ್ಕೆ ಬಹಿಷ್ಕಾರದ ನಡುವೆಯೇ ಇಸ್ರೇಲ್‌ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮಸೂದೆಯ ಪ್ರಮುಖ ಅಂಶವಾದ ಸುಪ್ರೀಂಕೋರ್ಟ್‌ನ ಅಧಿಕಾರ ನಿಯಂತ್ರಿಸುವ ಯೋಜನೆಗೆ ಇಸ್ರೇಲಿ ಸಂಸತ್ ಸೋಮವಾರ ಅನುಮೋದನೆ ನೀಡಿದೆ. ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮೂವ್‌ಮೆಂಟ್ ಫಾರ್ ಕ್ವಾಲಿಟಿ ಗವರ್ನ್‌ಮೆಂಟ್ ಎಂಬ ನಾಗರಿಕ ಸಮಾಜ ಗುಂಪು ಹೇಳಿಕೆ ನೀಡಿದೆ.
ವಿವಾದಾತ್ಮಕ ನ್ಯಾಯಾಂಗ ಸುಧಾರಣೆ ಮಸೂದೆಗೆ ದೇಶದಾದ್ಯಂತ ವ್ಯಾಪಕ ವಿರೋಧ, ಪ್ರತಿಭಟನೆ ವ್ಯಕ್ತವಾಗಿರುವ ಹೊರತಾಗಿಯೂ ಕಟ್ಟಾ ಬಲಪಂಥೀಯ ಮಿತ್ರಪಕ್ಷಗಳ ಬೆಂಬಲದಿಂದ ಸರಕಾರ ರಚಿಸಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಸೂದೆಗೆ ಕಾಯ್ದೆಯ ರೂಪು ಕೊಡುವ ಯತ್ನದಿಂದ ಹಿಂದೆಬಿದ್ದಿಲ್ಲ. ಸೋಮವಾರ ಸಂಸತ್‌ನಲ್ಲಿ ಮಸೂದೆಯನ್ನು ಮತಕ್ಕೆ ಹಾಕುವುದಾಗಿ ನೆತನ್ಯಾಹು ಘೋಷಿಸಿದಾಗ ವಿಪಕ್ಷ ಸದಸ್ಯರು ಒಗ್ಗೂಡಿ ವಿರೋಧಿಸಿದರು. ಆದರೆ ಸರಕಾರ ಪಟ್ಟು ಸಡಿಲಿಸದ ಕಾರಣ ವಿರೋಧ ಪಕ್ಷಗಳು ಶೇಮ್ ಶೇಮ್ ಎಂದು ಘೋಷಣೆ ಕೂಗುತ್ತಾ ಸದನವನ್ನು ಬಹಿಷ್ಕರಿಸಿ ಹೊರ ನಡೆದರು.
ವಿಪಕ್ಷಗಳ ಗೈರುಹಾಜರಿಯಲ್ಲಿ ಮಸೂದೆಯ ಪ್ರಮುಖ ಅಂಶವನ್ನು ಮತಕ್ಕೆ ಹಾಕಿದಾಗ ಆಡಳಿತ ಮೈತ್ರಿಕೂಟದ ಎಲ್ಲಾ ೬೪ ಸದಸ್ಯರೂ ನಿರ್ಣಯದ ಪರ ಮತ ಚಲಾಯಿಸಿದ್ದರಿಂದ ನಿರ್ಣಯ ೬೪-೦ ಮತಗಳಿಂದ ಅನುಮೋದನೆಗೊಂಡಿದೆ ಎಂದು ಸರಕಾರ ಘೋಷಿಸಿತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಾಗರಿಕ ಸಂಘಟನೆಗಳು, ದೇಶದಾದ್ಯಂತ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. ಸಂಸತ್ತಿನ ನಿರ್ಧಾರಗಳನ್ನು ಪ್ರಶ್ನಿಸುವ ಸುಪ್ರೀಂಕೋರ್ಟ್‌ನ ಸಾಮರ್ಥ್ಯಗಳನ್ನು ಸೀಮಿತಗೊಳಿಸುವುದರಿಂದ ಹಿಡಿದು ನ್ಯಾಯಾಧೀಶರನ್ನು ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸುವವರೆಗೆ ನ್ಯಾಯಾಂಗದ ಅಧಿಕಾರವನ್ನು ನಿಗ್ರಹಿಸುವ ಉದ್ದೇಶದಿಂದ ವ್ಯಾಪಕವಾದ ಬದಲಾವಣೆಗಳಿಗೆ ಈ ತಿದ್ದುಪಡಿ ಅವಕಾಶ ನೀಡುತ್ತದೆ. ಚುನಾವಣೆ ಮೂಲಕ ಆಯ್ಕೆಗೊಳ್ಳದ ನ್ಯಾಯಾಧೀಶರ ಅಧಿಕಾರವನ್ನು ನಿಗ್ರಹಿಸಲು ಈ ಬದಲಾವಣೆಯ ಅಗತ್ಯವಿದೆ ಎಂದು ನೆತನ್ಯಾಹು ಹಾಗೂ ಅವರ ಮಿತ್ರಪಕ್ಷಗಳು ಪ್ರತಿಪಾದಿಸುತ್ತಿವೆ.
ದೇಶವನ್ನು ಒಂದೇ ನೆಲೆಯಡಿ ಬಂಧಿಸಿರುವ ಸೂಕ್ಷ್ಮ ಸಾಮಾಜಿಕ ಸಂಬಂಧಗಳನ್ನು ಪರೀಕ್ಷಿಸಿದ ಜತೆಗೆ ದೇಶದ ಶಕ್ತಿಶಾಲಿ ಮಿಲಿಟರಿಯ ಒಗ್ಗಟ್ಟನ್ನು ಕೆರಳಿಸಿದ, ಮಿತ್ರರಾಷ್ಟ್ರ ಅಮೆರಿಕದ ತೀವ್ರ ಆಕ್ಷೇಪಕ್ಕೆ ಕಾರಣವಾಗಿರುವ ನ್ಯಾಯಾಂಗ ಸುಧಾರಣೆ ಮಸೂದೆಯನ್ನು ಜಾರಿಗೊಳಿಸದೆ ಬಿಡುವುದಿಲ್ಲ ಎಂದು ನೆತನ್ಯಾಹು ಸರಕಾರ ದೃಢವಾಗಿ ಘೋಷಿಸಿತ್ತು. ಭ್ರಷ್ಟಾಚಾರ ಆರೋಪದ ವಿಚಾರಣೆ ಎದುರಿಸುತ್ತಿರುವ ನೆತನ್ಯಾಹು ಮತ್ತು ಅವರ ಪಾಲುದಾರರ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿ ರಕ್ಷಣೆಗಾಗಿ ನ್ಯಾಯಾಂಗ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಸರಕಾರದ ನಿರ್ಧಾರಗಳನ್ನು ತಿರಸ್ಕರಿಸುವ ನ್ಯಾಯಾಧೀಶರ ಅಧಿಕಾರವನ್ನು ತಡೆಯುವ ಯೋಜನೆಗೆ ಸೋಮವಾರ ಇಸ್ರೇಲ್ ಸಂಸತ್ ಅನುಮೋದನೆ ದೊರಕಿದೆ.
ಪ್ರಮುಖ ಚಾರಿತ್ರಿಕ ಕ್ರಮದತ್ತ ಸಂಸತ್ ಪ್ರಥಮ ಹೆಜ್ಜೆ ಇರಿಸಿದೆ ಎಂದು ನ್ಯಾಯ ಇಲಾಖೆಯ ಸಚಿವ ಯಾರಿವ್ ಲೆವಿನ್ ಪ್ರತಿಕ್ರಿಯಿಸಿದ್ದಾರೆ. ಆದರೆ ಇದರ ವಿರುದ್ಧ ಇನ್ನಷ್ಟು ತೀವ್ರ ಪ್ರತಿಭಟನೆ ಮುಂದುವರಿಯಲಿದೆ ಎಂದು ವಿವಿಧ ಸಂಘಟನೆಗಳು ಘೋಷಿಸಿವೆ.

ಬೈಡೆನ್ ಅಸಮಾಧಾನ
ನ್ಯಾಯಾಂಗ ಸುಧಾರಣೆಗೆ ಪಟ್ಟು ಹಿಡಿದಿರುವ ಇಸ್ರೇಲ್ ಸರಕಾರದ ಕ್ರಮವನ್ನು ಟೀಕಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ?ದೇಶದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ಪಡೆದುಕೊಂಡಡು ಮುಂದುವರಿಯಬೇಕು. ಆತುರದ ಕ್ರಮ ಸಲ್ಲದು. ಇಸ್ರೇಲ್ ಎದುರಿಸುತ್ತಿರುವ ಬೆದರಿಕೆ, ಸವಾಲುಗಳನ್ನು ಗಮನಿಸಿದರೆ, ಈ ವಿಷಯದಲ್ಲಿ ಆತುರದ ಕ್ರಮಕ್ಕೆ ಮುಂದಾಗುವುದು ಸಮಂಜಸವಲ್ಲ. ಸರಕಾರ ಜನರ ಭಾವನೆಗಳನ್ನು ಗಮನಿಸಬೇಕಾಗಿದೆ ಎಂದು ಬೈಡನ್ ಹೇಳಿದ್ದಾರೆ.