ಸುಪ್ರಿಯಾ ಹೇಳಿಕೆಗೆ ಸಚಿನ್ ಖಂಡನೆ

ನವದೆಹಲಿ ,ಮಾ.೨೯-ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಗ್ಗೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರು ಮಾಡಿದ ಅವಹೇಳನಕಾರಿ ಟೀಕೆಗಳಿಗೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದಾರೆ.
ಕೆಲವರು ತಪ್ಪು ಮಾತನಾಡಿದರೆ. ನಾವು ಅದನ್ನು ಎಂದಿಗೂ ಕ್ಷಮಿಸುವುದಿಲ್ಲ. ಅಸಂಸದೀಯ ಭಾಷೆ ಬಳಕೆ ಒಳ್ಳೆಯದಲ್ಲ ಎಂದು ಸುಪ್ರಿಯಾ ಶ್ರೀನಾಥೆ ಹೇಳಿಕೆಯನ್ನು ಖಂಡಿಸಿದ್ದಾರೆ.ವ್ಯಕ್ತಿಗತ, ವೈಯಕ್ತಿಕ ಟೀಕೆ ಸರಿಯಾದ ಮಾರ್ಗ ವಲ್ಲ ಎಂದು ಯುವ ಸಮಾವೇಶದಲ್ಲಿ ಸಚಿನ್ ಪೈಲಟ್ ಸ್ಪಷ್ಟಪಡಿಸಿದ್ದಾರೆ.
ನಾವು ಸಾರ್ವತ್ರಿಕ ಚುನಾವಣೆಯಲ್ಲಿ ಸಮಸ್ಯೆಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತೇವೆ. ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳನ್ನು ಮಾತ್ರ ನಾವು ಪ್ರಚಾರಕ್ಕೆ ಬಳಸುತ್ತೇವೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
ಕಂಗನಾ ರಣಾವತ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಂತೆ ಸುಪ್ರಿಯಾ ಶ್ರೀನಾಥೆ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ .ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಸುಪ್ರಿಯಾ ಶ್ರೀನಾಥೆ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಸುಪ್ರಿಯಾ ಶ್ರೀನಾಥೆ ಹೇಳಿಕೆಗೆ ಕಂಗನಾ ರಣಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಸಾಮಾನ್ಯ ಮಹಿಳೆಯ ಘನತೆಯನ್ನು ಕಾಪಾಡುವ ಚಿತ್ರಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ನೆನಪಿಸಿದ್ದಾರೆ.