ಸುಪಾರಿ ಕೊಟ್ಟು ಪತಿ ಕೊಲೆ ಪತ್ನಿ-ಪ್ರಿಯಕರ ಸೇರಿ ೧೦ ಮಂದಿ ಸೆರೆ

Suddanagunte Palya

ಬೆಂಗಳೂರು, ಮಾ.೨೫-ಪ್ರಿಯಕರನ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ನಡುರಸ್ತೆಯಲ್ಲಿ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿಸಿದ ಪತ್ನಿ ಪ್ರಿಯತಮ ಸೇರಿ ೯ ಮಂದಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಲಕ್ ನಗರದ ಅಪ್ಸರ್ ಖಾನ್ (೪೧), ಈತನ ಪ್ರಿಯತಮೆ ತಸ್ಲಿಂ ಭಾನು (೨೯), ತಬ್ರೇಜ್ ಪಾಷ (೨೬), ಸೈಯದ್ ವಸೀಂ (೨೬), ವೆಂಕಟೇಶ್ (೧೯), ಭರತ್ (೧೮), ಯುಗೇಂದ್ರ (೧೯), ಚೇತನ್ (೧೯), ಇಬ್ರಾಹಿಂ (೧೯) ಹಾಗೂ ಮತ್ತೊಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮಾ.೧೯ರಂದು ಸಂಜೆ ೬.೩೦ರ ಸುಮಾರಿನಲ್ಲಿ ನ್ಯೂ ಗುರಪ್ಪನಪಾಳ್ಯ ಟಿಂಬರ್‍ಗಲ್ಲಿ, ೪ನೆ ಮುಖ್ಯರಸ್ತೆ, ಸರ್ಕಾರ್ ಗ್ಲಾಸ್ ಮತ್ತು ಪ್ಲೇವುಡ್ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಹಮ್ಮದ್ ಶಫಿ ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗಡೆ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ನಟರಾಜ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಸುಪಾರಿ ಪಡೆದಿರುವುದು ಗೊತ್ತಾಗಿದೆ.
ಅನೈತಿಕ ಸಂಬಂಧ
ಆರೋಪಿ ಅಪ್ಸರ್ ಖಾನ್‌ಗೆ ಎರಡು ವರ್ಷಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಆರೋಪಿತೆ ತಸ್ಲಿಂ ಭಾನು ಪರಿಚಯವಾಗಿ ಪರಸ್ಪರ ಆಕರ್ಷಣೆಗೊಳಗಾಗಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅಕ್ರಮ ಸಂಬಂಧಕ್ಕಾಗಿ ತಸ್ಲಿಂ ಭಾನು ಅವರ ಪತಿ ಮಹಮ್ಮದ್ ಶಫಿಯನ್ನು ಮುಗಿಸಲು ಅಪ್ಸರ್ ಖಾನ್ ಸಂಚು ರೂಪಿಸುತ್ತಾನೆ. ಮಹಮ್ಮದ್ ಶಫಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ೭೫ ಲಕ್ಷ ಹಣವನ್ನು ರಿಯಲ್ ಎಸ್ಟೇಟ್ ಬಿಜಿನೆಸ್‌ನಲ್ಲಿ ಮೈಸೂರಿನಲ್ಲಿ ಇನ್‌ವೆಸ್ಟ್ ಮಾಡಿಸಿ ಶಫಿಗೆ ೫ ಲಕ್ಷ ರೂ. ಕಮಿಷನ್ ಕೊಡುವುದಾಗಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು.
ಮಾಟ-ಮಂತ್ರ
ಆ ಮೂಲಕ ಆತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದು, ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಹಮ್ಮದ್ ಶಫಿಯನ್ನು ಮಾಟ-ಮಂತ್ರದಿಂದ ಮುಗಿಸಲು ಇಬ್ಬರೂ ಸೇರಿ ಪ್ರಯತ್ನಿಸಿ ವಿಫಲರಾಗಿದ್ದರು.
ನಂತರ ಹೇಗಾದರೂ ಮಾಡಿ ಮಹಮ್ಮದ್ ಶಫಿಯನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಅಪ್ಸರ್‍ಖಾನ್ ಮತ್ತು ಮೃತನ ಪತ್ನಿ ತಸ್ಲಿಂ ಭಾನು ಸುಪಾರಿ ಕೊಟ್ಟು ಕೊಲೆ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಅಪ್ಸರ್ ಖಾನ್ ಸಂಬಂಧಿ ಕ್ರಿಮಿನಲ್ ಹಿನ್ನೆಲೆಯಿರುವ ತಬ್ರೇಜ್ ಹಾಗೂ ವಸೀಂನಿಗೆ ಸುಪಾರಿ ನೀಡಿದ್ದು, ಸುಪಾರಿ ಪಡೆದ ಇವರಿಬ್ಬರೂ ತಮಗೆ ಪರಿಚಯವಿರುವ ಉಳಿದ ಆರೋಪಿಗಳಿಗೆ ತಲಾ ೨ ಲಕ್ಷ ರೂ. ಸುಪಾರಿ ಹಣ ಹಾಗೂ ಪ್ರಕರಣದ ಖರ್ಚು-ವೆಚ್ಚ ಕೊಡುವುದಾಗಿ ಹೇಳಿದ್ದಾರೆ.
ಸುಪಾರಿ ಕೊಲೆ
ಅಪ್ಸರ್ ಖಾನ್‌ನ ಒಳಸಂಚಿನಂತೆ ಮಾರ್ಚ್ ೧೯ರಂದು ಕಮಿಷನ್ ಹಣ ಕೊಡುವುದಾಗಿ ಮಹಮ್ಮದ್ ಶಫಿಯನ್ನು ನ್ಯೂ ಗುರಪ್ಪನಪಾಳ್ಯ, ಟಿಂಬರ್ ಗಲ್ಲಿಗೆ ಬರುವಂತೆ ಹೇಳಿ ಅಲ್ಲಿಗೆ ಸುಪಾರಿ ಪಡೆದಿದ್ದ ಆರೋಪಿಗಳನ್ನು ಕರೆಸಿಕೊಂಡಿದ್ದಾನೆ.
ಆರೋಪಿಗಳು ಮಹಮ್ಮದ್ ಶಫಿಯನ್ನು ಲಾಂಗ್, ಮಚ್ಚು, ರಾಡ್‌ಗಳಿಂದ ಹೊಡೆದು ಕೊಲೆಮಾಡಿ ತಲೆಮರೆಸಿಕೊಂಡಿದ್ದರು.
ಕಮೀಷನರ್ ಪ್ರಶಂಸೆ:
ತನಿಖಾ ತಂಡವು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮೊಬೈಲ್ ಗಳು, ವಾಹನಗಳು, ಮಾರಕಸ್ತ್ರಗಳಾದ ಲಾಂಗು, ಮಚ್ಚು, ರಾಡು, ಸುಪಾರಿ ಪಡೆದಿದ್ದ ಹಣ ಹಾಗೂ ಅಪ್ಸರ್‍ಖಾನ್ ತಸ್ಲೀಂ ಭಾನುಗೆ ಪ್ರೀತಿಯ ಕಾಣಿಕೆಯಾಗಿ ನೀಡಿದ್ದ ಉಡುಗೊರೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಯಶಸ್ವಿ ಕಾರ್ಯಚರಣೆಯನ್ನು ಪೊಲೀಸ್ ಆಯುಕ್ತರು ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.