ಸುಧೀರ್ಘ ಸೇವೆ, ಜನಾನುರಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಗೆ ಬೀಳ್ಕೊಡುಗೆ


ದಾವಣಗೆರೆ ಜು.21;  ದಾವಣಗೆರೆ ಜಿಲ್ಲಾಧಿಕಾರಿಯಾಗಿ ನಿರಂತರವಾಗಿ ಎರಡು ವರ್ಷ ಹತ್ತು ತಿಂಗಳ ಕಾಲ ಜನರೊಂದಿಗೆ ಅಭಿವೃದ್ದಿ ಪರವಾಗಿ ಕೆಲಸ ಮಾಡಿದ ಹಿಂದಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಗೆ ಜಿಲ್ಲಾ ಆಡಳಿತ ಹಾಗೂ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರಿಂದ ಹೃದಯ ಸ್ಪರ್ಶಿ ಬೀಳ್ಕೊಡುಗೆಯನ್ನು ಜುಲೈ 20 ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಂಭಾಂಗಣದಲ್ಲಿ ನೀಡಲಾಯಿತು.ಪ್ರಸ್ತುತ ಮಹಾಂತೇಶ ಬೀಳಗಿಯವರಿಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾವಣೆಯಾಗಿರುತ್ತದೆ. ಮಹಾಂತೇಶ ಬೀಳಗಿಯವರು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಮಾಡಿದ ಸೇವೆಯನ್ನು ಜೀವಮಾನ ಇರುವವರೆಗೆ ಮರುಯುವಂತಿಲ್ಲ, ಅಂತಹ ಅವಕಾಶವನ್ನು ಕಲ್ಪಿಸಿಕೊಟ್ಟಂತಹ ಸರ್ಕಾರ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಸದಾ ಚಿರಋಣಿಯಾಗಿದ್ದೇನೆ. ಎಲ್ಲರ ಸಹಕಾರದಿಂದ ಇಂದು ಜನರ ಜಿಲ್ಲಾಧಿಕಾರಿಯಾಗಿ ಕೆಲಸ  ಮಾಡಲು ಸಾಧ್ಯವಾಗಿದೆ ಎಂದರು.ಜಿಲ್ಲೆಗೆ ಬಂದ ಕೆಲವೇ ತಿಂಗಳಲ್ಲಿ ಕೊರೋನಾ ಅಲೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಬೆರೆತು ಹಾಗೂ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಹೆಚ್ಚು ಹೆಚ್ಚು ಶ್ರಮವಹಿಸಿ ಕೆಲಸ ಮಾಡಲು ಸಾಧ್ಯವಾಯಿತು. ಎಂದಿಗೂ ಕೆಲಸ ಕೆಲಸ ಎನಿಸಲಿಲ್ಲ, ಪ್ರತಿ ದಿನವೂ ಮಹತ್ವದ ದಿನವೆಂದು ಅರಿತು ಕೆಲಸ ಮಾಡಿದ್ದರಿಂದ ಆರಂಭದಲ್ಲಿ ಹೇಳಿದ ಮಾತಿನಂತೆ ಜನರ ಜಿಲ್ಲಾಧಿಕಾರಿಯಾಗಲು ಬಯಸಿದ್ದೇನೆ ಎಂದಿದ್ದು ಅದರಂತೆ ಇಂದು ಜನರು ಮಾತನಾಡುವಂತೆ ಕೆಲಸ ಮಾಡಿ ನನ್ನ ಕೆಲಸವನ್ನು ನಿಮಗೆಲ್ಲರಿಗೂ ಬಿಟ್ಟು ಹೋಗುತ್ತಿದ್ದೇನೆ. ಜನರು ಹೇಳುವ ಒಳ್ಳೆಯ ಕೆಲಸದಲ್ಲಿ ಎಲ್ಲರ ಸಹಕಾರ ಇದೆ ಎಂದು ತಮ್ಮ ಅವಧಿಯಲ್ಲಿನ ಸೇವೆಯ ಬಗ್ಗೆ ಹಾಗೂ ಇಲ್ಲಿನ ಜನರು ತೋರಿಸಿದ ಪ್ರೀತಿಯ ಬಗ್ಗೆ ಸ್ಮರಿಸುತ್ತಾ ಮುಂದೆಯೂ ಸ್ಮರಿಸುವಂತಹ ಕೆಲಸ ಮಾಡುವೆನೆಂದು ತಿಳಿಸಿ ನನಗೆ ನೀಡಿದ ಸಹಕಾರವನ್ನು ಹೊಸ ಜಿಲ್ಲಾಧಿಕಾರಿಯವರಿಗೆ ನೀಡಿ ಎಂದು ತಿಳಿಸಿದರು.ಹೊಸ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಕೆಲಸ ಮಾಡಿದ್ದರಿಂದಲೇ ಜನರೇ ಹೇಳಿಕೊಂಡು ಕಚೇರಿಗೆ ಬರುತ್ತಿದ್ದಾರೆ, ಇದನ್ನು ಕಳೆದ ಒಂದು ವಾರದಿಂದ ಗಮನಿಸಿದ್ದೇನೆ. ಈ ಹಿಂದೆ ನೀಡಿದ ಸಹಕಾರವನ್ನು ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಕೈಜೋಡಿಸೋಣ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಚನ್ನಪ್ಪ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಶ್ರೀಮತಿ ರೇಖಾ ಮಹಾಂತೇಶ್ ಬೀಳಗಿ, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ, ಸ್ಮಾರ್ಟ್‍ಸಿಟಿ ಯೋಜನೆ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ, ಉಪವಿಭಾಗಾಧಿಕಾರಿ ದುರ್ಗಶ್ರೀ, ಡಾ.ಹುಲ್ಲುಮನಿ ತಿಮ್ಮಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಕುಮಾರಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ನಜ್ಮಾ, ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸೇರಿದಂತೆ ವಿವಿಧ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.