ಸುಧೀರ್ಘ ಚರ್ಚೆ ನಂತರ ೩೪ ದಿನ ಪೌರ ಕಾರ್ಮಿಕರ ಮುಷ್ಕರಕ್ಕೆ ತೆರೆ

ಫ್ಯಾಬಸ್ ವೇತನ ಮಾದರಿ ಸೇರಿ ೯ ಬೇಡಿಕೆ ಈಡೇರಿಕೆ ಲಿಖಿತ ಭರವಸೆ
ರಾಯಚೂರು.ಮಾ.೨೮- ನಗರಸಭೆ ಪೌರ ಕಾರ್ಮಿಕರ ೩೪ ದಿನಗಳ ಹೋರಾಟಕ್ಕೆ ನಿನ್ನೆ ತೆರೆಯೆಳೆಯಲಾಗಿದ್ದು, ೯ ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆಯ ಪತ್ರವನ್ನು ಹೊರ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಮಾ.೨೭ ರಂದು ಶಾಸಕರ ಕಛೇರಿಯಲ್ಲಿ ನಡೆದ ಸಭೆ ಅಧ್ಯಕ್ಷತೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಅವರು ವಹಿಸಿದ್ದರು. ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಹಾಗೂ ಯೋಜನಾ ನಿರ್ದೇಶಕ ಮಹೇಂದ್ರಕುಮಾರ, ಪೌರಾಯುಕ್ತ ವೆಂಕಟೇಶ ಅವರ ಸಮ್ಮುಖದಲ್ಲಿ ಹೊರ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಎಸ್.ಮಾರೆಪ್ಪ ಅವರೊಂದಿಗಿನ ಸುಧೀರ್ಘ ಚರ್ಚೆಯ ನಂತರ ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಯ ಒಪ್ಪಂದಕ್ಕೆ ಸಹಿ ಮಾಡಿ, ಎರಡು ಪುಟಗಳ ಪತ್ರವನ್ನು ನೀಡುವ ಮೂಲಕ ಹೋರಾಟಕ್ಕೆ ತೆರೆ ಎಳೆಯಲಾಯಿತು. ನಗರಸಭೆಯಲ್ಲಿ ಹಾಲಿ ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಈಃಂS ವೇತನ ಮಾದರಿಯಲ್ಲಿ ಅನುಮೋದಿಸಲು ಜಿಲ್ಲಾಧಿಕಾರಿಗಳ ಕಛೇರಿಯಿಂದ ಕ್ರಮ ವಹಿಸಲು ತೀರ್ಮಾನಿಸಲಾಯಿತು ಎನ್ನುವ ಪ್ರಥಮ ಬೇಡಿಕೆಯನ್ನು ಒಪ್ಪಿಕೊಳ್ಳಲಾಗಿದೆ.
ಅಲ್ಲದೇ, ಹೊರ ಗುತ್ತಿಗೆ ಪೌರ ಕಾರ್ಮಿಕರು ಮೃತಪಟ್ಟಲ್ಲಿ, ಶವ ಸಂಸ್ಕಾರಕ್ಕಾಗಿ ನಗರಸಭೆ ನಿಧಿಯಿಂದ ೧೫ ಸಾವಿರ ಸಹಾಯಧನ ತಕ್ಷಣವೇ ಪಾವತಿಸುವಂತೆ ತೀರ್ಮಾನಿಸಲಾಯಿತು. ಹೊರ ಗುತ್ತಿಗೆ ಪೌರ ಕಾರ್ಮಿಕರ ಮಕ್ಕಳಿಗೆ ಶೇ.೨೪.೧೦ ರಲ್ಲಿ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಮಂಜೂರಾತಿ ಮಾಡುವುದು. ಹೊರ ಗುತ್ತಿಗೆ ಪೌರ ಕಾರ್ಮಿಕರ ಸಫಾಯಿ ಕರ್ಮಚಾರಿ ನಿಯೋಗದಿಂದ ಪಿಎಂವೈ ಹೊರ ಗುತ್ತಿಗೆಯಿಂದ ಹಾಗೂ ರಾಜ್ಯ ಸರ್ಕಾರದಿಂದ ಮತ್ತು ಫಲಾನುಭವಿಗಳ ವಂತಿಕೆಯ ಹಣ ಮಾತ್ರ ನಗರಸಭೆಯಿಂದ ಗೃಹ ನಿರ್ಮಾಣಕ್ಕಾಗಿ ಸಹಾಯಧನವನ್ನು ನೀಡುವುದು.
ಹೊರ ಗುತ್ತಿಗೆ ಪೌರ ಕಾರ್ಮಿಕರು ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಆದ್ಯತೆ ಮೇರೆಗೆ ಅವರ ಮಕ್ಕಳಿಗೆ ನೇಮಿಸಿಕೊಳ್ಳುವ ಸಂಬಂಧ ತಜ್ಞರ ಸಲಹೆ ಪಡೆದು, ಮುಂದಿನ ಕ್ರಮ ವಹಿಸಲು ತೀರ್ಮಾನಿಸಲಾಯಿತು. ಹೊರ ಗುತ್ತಿಗೆ ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಹಾರಗಳಾದ ಸಮವಸ್ತ್ರ, ಪಿಪಿ ಕಿಟ್, ಆಂಡ್ ಗ್ಲೌಸ್, ಚಪ್ಪಲಿ, ಬೂಟ್, ಮಾಸ್ಕ್ ಹಾಗೂ ಇನ್ನಿತರ ಸಾಮಾಗ್ರಿಗಗಳನ್ನು ಪೂರೈಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ೨೦೧೨ ರಲ್ಲಿ ಗುತ್ತೇದಾರರಿಂದ ವಜಾಗೊಂಡ ಪೌರ ಕಾರ್ಮಿಕರನ್ನು ಮುಂದಿನ ದಿನಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಕ್ರಮ ಜರುಗಿಸಲು ತೀರ್ಮಾನಿಸಲಾಯಿತು.
ನಗರಸಭೆಗೆ ಹೊರ ಗುತ್ತಿಗೆ ವಾಹನ ಚಾಲಕರ ಬಾಕಿ ವೇತನ (೯) ತಿಂಗಳ ಬಾಕಿ ವೇತನದಲ್ಲಿ, (೪) ತಿಂಗಳ ವೇತನವನ್ನು ಕೂಡಲೇ ಪಾವತಿಸುವಂತೆ ತೀರ್ಮಾನಿಸಲಾಯಿತು. ನಗರಸಭೆಗೆ ಹೊರ ಗುತ್ತಿಗೆ ಪೌರ ಕಾರ್ಮಿಕರ ರಜೆಗೆ ಸಂಬಂಧಿಸಿ, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ರಾಯಚೂರು ಇವರ ಪತ್ರದಂತೆ ಕ್ರಮ ವಹಿಸಲಾಗುವುದು ಎನ್ನುವ ಒಟ್ಟು ೯ ವಿಷಯಗಳ ಮೇಲೆ ತೀರ್ಮಾನ ಕೈಗೊಳ್ಳಲಾಯಿತು.
ಈ ಮಾತುಕತೆ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಈ.ಶಶಿರಾಜ, ಎನ್.ಕೆ.ನಾಗರಾಜ, ಕಡಗೋಳ ಆಂಜಿನೇಯ್ಯ, ಉಮಾ ರವೀಂದ್ರ ಜಲ್ದಾರ್, ವೆಂಕಟಮ್ಮ ಎನ್.ಶ್ರೀನಿವಾಸರೆಡ್ಡಿ, ಬುಜ್ಜಮ್ಮ ಶಂಕ್ರಪ್ಪ, ಹರೀಶ ನಾಡಗೌಡ, ಪಿ.ಯಲ್ಲಪ್ಪ, ಜಯಪಾಲರೆಡ್ಡಿ, ಬಸಯ್ಯ ಹಿರೇಮಠ ಅವರು ಉಪಸ್ಥಿತರಿದ್ದರು.