ಸುಧಾ ಬಳಿ 200ಕ್ಕೂ ಹೆಚ್ಚು ಸ್ವತ್ತುಗಳ ದಾಖಲೆ ಪತ್ತೆ

ಬೆಂಗಳೂರು, ನ.೯- ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ. ಸುಧಾ ಅವರ ಮನೆ ಮೇಲಿನ ದಾಳಿ ವೇಳೆ ೨೦೦ಕ್ಕೂ ಹೆಚ್ಚು ಸ್ವತ್ತುಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳು ಪತ್ತೆಯಾಗಿವೆ
ಎರಡು ದಿನಗಳ ಹಿಂದೆ ಕೊಡಿಗೆಹಳ್ಳಿ ಯಲ್ಲಿನ ಡಾ.ಬಿ.ಸುಧಾ ಅವರ ಮನೆ ಸೇರಿದಂತೆ ೭ ಸ್ಥಳಗಳಲ್ಲಿ ಎಸಿಬಿ ಶೋಧಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಸುಧಾ, ಅವರ ಕುಟುಂಬ ಸದಸ್ಯರು, ಅವರಿಗೆ ಪರಿಚಯ ಇರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು, ಆಸ್ತಿಗಳ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳು ದೊರೆತಿವೆ.
ಆರೋಪಿ ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ ೫೦ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳು, ಸುಮಾರು ೫೦ಕ್ಕೂ ಹೆಚ್ಚು ಅಧಿಕ ಚೆಕ್ ಲೀಫ್‌ಗಳು ಪತ್ತೆಯಾಗಿವೆ. ಆರೋಪಿ ಮತ್ತು ಅವರೊಂದಿಗೆ ವ್ಯವಹಾರದ ಸಂಬಂಧ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಯಲ್ಲಿ ೩೬.೮೯ ಲಕ್ಷ ನಗದು ಹಣ ದೊರೆತಿದೆ. ಸುಧಾ ಮತ್ತು ಅವರಿಗೆ ಸಂಬಂಧಪಟ್ಟ ಇತರ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿ ಸುಮಾರು ೩.೫ ಕೋಟಿ ರೂ. ಠೇವಣಿ ಪತ್ತೆಯಾಗಿದೆ ಎಂದು ಎಸಿಬಿ ಎಸ್ ಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಪ್ರಮುಖವಾಗಿ ಸುಧಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಪತ್ತೆಯಾದ ಚಿನ್ನಾಭರಣ ಕಂಡು ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು. ರಾಶಿ ರಾಶಿ ಚಿನ್ನದ ಸರಗಳು, ಉಂಗುರಗಳು, ಓಲೆಗಳು, ಚಿನ್ನದ ಡಾಬು ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಕಂಡು ಬಂದಿದ್ದವು.
ಅವುಗಳ ಒಟ್ಟಾರೆ ಲೆಕ್ಕಾಚಾರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿರುವ ಎಸಿಬಿ ೩.೭ ಕೆಜಿ ಚಿನ್ನಾಭರಣ, ೧೦.೫ ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ
ದಾಖಲಾತಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಯುತ್ತಿದ್ದು ಶೋಧ ಕಾರ್ಯಾಚರಣೆ ಬಳಿಕ ಸುಧಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವುದಾಗಿ ಸುಧಾ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಳಿ ಸಂಬಂಧ ವಿಚಾರಣೆ ನಡೆಸಲು ನಿನ್ನೆ ಸುಧಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಅದರಂತೆ ವಿಚಾರಣೆಗೆ ಹಾಜರಾದ ಸುಧಾ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.
ಕೆಎಎಸ್ ಅಧಿಕಾರಿ ಡಾ.ಬಿ ಸುಧಾ ಅವರ ಆಸ್ತಿಯ ರಹಸ್ಯವನ್ನು ಎಸಿಬಿ ಜಾಲಾಡಿದಷ್ಟು ಹಲವಾರು ಮಾಹಿತಿಗಳು ಹೊರಬರುತ್ತಿವೆ.
ಎಸಿಬಿ ಇನ್ನೂ ಕೂಡ ಕೋಟಿ ಕೋಟಿ ಆಸ್ತಿ ವಿಚಾರದ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದೆ.
ಆಸ್ತಿ, ಚಿನ್ನಾಭಾರಣ, ಆಪ್ತರ ಆಸ್ತಿ ಇವುಗಳನ್ನ ಲೆಕ್ಕ ಮಾಡಿದಷ್ಟು ಹಲವಾರು ಮಾಹಿತಿಗಳು ಬಹಿರಂಗವಾಗುತ್ತಿದ್ದು, ಅವುಗಳ ಬಗ್ಗೆ ಎಸ್ ಪಿ ಕುಲದೀಪ್ ಕುಮಾರ್ ಜೈನ್ ಅವರು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಸುಧಾ ತನ್ನ ಹೆಸರಿನಲ್ಲಿ ಮಾತ್ರವಲ್ಲದೇ ತನ್ನ ಆಪ್ತೆ ಸ್ನೇಹಿತರ ಮುಖಾಂತರ ರಿಯಲ್ ಎಸ್ಟೇಟ್ ಸೇರಿದಂತೆ, ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಆಸ್ತಿಯ ವಿವರ ಎಸಿಬಿ ಪಡೆಯಬೇಕಾದದ್ದು ಅನಿವಾರ್ಯವಾಗಿದೆ. ಇಂದು ವಿಚಾರಣೆ ವೇಳೆ ಜಪ್ತಿ ಮಾಡಿದಾಗ ಸಿಕ್ಕಿದ ಅಕ್ರಮ ಆಸ್ತಿಯ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ಸದ್ಯ ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರಗಳು ಕೂಡ ಪತ್ತೆಯಾಗಿವೆ ಎನ್ನಲಾಗ್ತಿದೆ. ಸುಧಾ ಅವರು ಬಿಡಿಎ ಭೂ ಸ್ವಾಧೀನ ಅಧಿಕಾರಿಯಾಗಿದ್ದ, ವೇಳೆ ಅಕ್ರಮ ಆಸ್ತಿ ಮಾಡಿದ್ದಾರೆ. ಎಸಿಬಿ ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಸುಧಾ ಅವರ ಆಸ್ತಿಯ ಸಂಪೂರ್ಣ ಮಾಹಿತಿ ಎಷ್ಟೆಂಬುದನ್ನು ಪತ್ತೆ ಹಚ್ಚಲು ಎಸಿಬಿ ಇನ್ನೂ ತನಿಖೆಯಲ್ಲಿ ತೊಡಗಿದೆ.