ಸುಧಾರಣೆಗೊಳ್ಳುತ್ತಿರುವ ಸರ್ಕಾರಿ ಶಾಲೆಗಳು


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜ.12: ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಸುಧಾರಣೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕಮ್ಮತ್ತಹಳ್ಳಿ-ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಕಮ್ಮತ್ತಹಳ್ಳಿ ಕ್ರಾಸ್ ನಲ್ಲಿರುವ ವೇದಿಕ್ ವಿದ್ಯಾಲಯದ ವೇದಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣವು ಮನುಷ್ಯನನ್ನು ವಿಜ್ಞಾನಿಯಾಗಿಸಿದರೆ, ಸಂಸ್ಕಾರ ಸುಜ್ಞಾನಿಯನ್ನಾಗಿಸುತ್ತದೆ ಎಂದ ಅವರು, ಚಟುವಟಿಕೆ ಆಧಾರಿತ ಶಿಕ್ಷಣ ಅಗತ್ಯವಾಗಿದೆ ಎಂದರು.
ವಿನ್ನರ್ಸ್ ಕೆರಿಯರ್ ಅಕಾಡೆಮಿ ಮುಖ್ಯಸ್ಥ ಶಿವರಾಜ್ ಕಬ್ಬೂರು ಮಾತನಾಡಿ, ಪೋಷಕರು ಬಳಸುವ ಮೊಬೈಲ್ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಮೊಬೈಲ್ ಬದಿಗೊತ್ತಿ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧದೊಂದಿಗೆ ಮಕ್ಕಳಲ್ಲಿ ತಾಳ್ಮೆ ಶ್ರದ್ಧೆಯನ್ನು ಬೆಳಸಬೇಕು ಎಂದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸರ್ವೋದಯ ವಿದ್ಯಾಸಂಸ್ಥೆಯ ಎನ್.ಟಿ ಮರುಳಸಿದ್ದಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಂದಿನಿ ಕೆ.ನಾರನಗೌಡ, ಮುಖಂಡ ಎ.ವೈ.ಮಹೇಂದ್ರ, ಕೆ.ಎಸ್ ಬಸವಲಿಂಗಪ್ಪ, ಎಂ.ಮಂಜುನಾಥ್ ಅವರೂ ಇದ್ದರು.