ಸುಧಾಕರ್ ವಿರುದ್ಧ ಬಿಜೆಪಿ ಶಾಸಕರ ಎತ್ತಿಕಟ್ಟಿದ ಸಿದ್ದು


ಬೆಂಗಳೂರು, ಮಾ. ೨೫- ಸಚಿವ ಡಾ. ಕೆ. ಸುಧಾಕರ್ ಅವರ ಏಕಪತ್ನಿವ್ರತಸ್ಥ ಹೇಳಿಕೆ ವಿವಾದಕ್ಕೆ ಕಾರಣವಾಗಿ ಪಕ್ಷ ಬೇಧ ಮರೆತು ಶಾಸಕರು, ರಾಜಕೀಯ ನಾಯಕರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿರುವಾಗಲೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸುಧಾಕರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಹಾಗೂ ನಾಯಕರನ್ನು ಮುಜುಗರಕ್ಕೆ ಸಿಲುಕಿಸುವ ತಂತ್ರ ರೂಪಿಸಿದ್ದಾರೆ. ಅದರ ಪ್ರಕಾರ ಬಿಜೆಪಿ ಶಾಸಕರಿಗೆ ಸುಧಾಕರ್ ಹೇಳಿಕೆ ಸಂಬಂಧ ಏನು ಮಾಡಬೇಕು ಎಂಬ ಬಗ್ಗೆಯೂ ಅವರೂ ಟ್ವೀಟ್ ಮಾಡಿದ್ದಾರೆ.
ಸಚಿವ ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸುವುದಾದರೇ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯಬೇಕು ಎಂದು ಸಿದ್ದರಾಮಯ್ಯ ಟ್ವೀಟರ್‌ನಲ್ಲಿ ಒತ್ತಾಯಿಸಿದ್ದಾರೆ.
ಒಂದು ವೇಳೆ ಬಿಜೆಪಿ ಶಾಸಕರು ತನಿಖೆಗೆ ಒಳಪಡಲು ಬಯಸದಿದ್ದರೆ ಸಚಿವ ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಂಡಂತಾಗುತ್ತದೆ. ಹಾಗಾಗಿ ಸರ್ಕಾರ ಬಿಜೆಪಿ ಶಾಸಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ೪೯೪ ಮತ್ತು ೪೯೫ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. ೧೯೫೫ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧ ಎಂದು ಸಿದ್ಧರಾಮಯ್ಯ ಟ್ವೀಟ್‌ನಲ್ಲಿ ಬಿಜೆಪಿ ಶಾಸಕರ ವಿರುದ್ಧ ನಯವಾಗಿಯೇ ಚಾಟಿ ಬೀಸಿದ್ದಾರೆ.
ರಾಜ್ಯದ ಯಾವ ಶಾಸಕರು ಏಕಪತ್ನಿವ್ರತಸ್ಥರಲ್ಲ ಎಂಬ ಸಚಿವ ಸುಧಾಕರ್ ಹೇಳಿಕೆ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರಹೆಗಡೆ ಕಾಗೇರಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ಬಿಜೆಪಿ ಶಾಸಕರಿಗೂ ಅನ್ವಯವಾಗುವ ಕಾರಣ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕಾಗಿ ಸ್ಪಷ್ಟಪಡಿಸಲಿ ಎಂದು ಸಿದ್ಧರಾಮಯ್ಯ ಟ್ವೀಟರ್‌ನಲ್ಲಿ ಸವಾಲು ಹಾಕಿದ್ದಾರೆ.