ಸುಧಾಕರ್ ರಾಜೀನಾಮೆಗೆ ಆಗ್ರಹ

ಬೆಂಗಳೂರು, ಮಾ. ೨೫- ಆರೋಗ್ಯ ಸಚಿವ ಕೆ. ಸುಧಾಕರ್ ಅವರು ೨೨೫ ಶಾಸಕರುಗಳು ಏಕಪತ್ನಿಯನ್ನು ಹೊಂದಿದ್ದಾರೆಯೇ ನೀಡಿರುವ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು ಹಾಗೂ ನೈತಿಕ ಹೊಣೆ ಒತ್ತು ಕೂಡಲೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ವಿವಾದಾತ್ಮಕ ಹೇಳಿಕೆ ನೀಡಿರುವ ಡಾ. ಕೆ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಮುಖಂಡ ಎಸ್. ಮನೋಹರ್ ಅವರು ಸಚಿವ ಸುಧಾಕರ್ ಅವರ ಮೇಲೆ ಯಾರೂ ಆರೋಪ ಹೊರಿಸಲಿಲ್ಲ. ಆದರೂ ಅವರೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಅವರಲ್ಲಿರುವ ಅನುಮಾನದ ರೋಗಕ್ಕೆ ಎಲ್ಲರನ್ನೂ ಸೇರಿಸಿ ಈ ರೀತಿ ನೀಡಿರುವ ಹೇಳಿಕೆಯು ಅತ್ಯಂತ ಬಾಲಿಶತನದ ಹಾಗೂ ಬೇಜವಾಬ್ದಾರಿತನದ ಹೇಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆಗೆ ಆಯ್ಕೆಯಾಗಿರುವ ಮಹಿಳಾ ಶಾಸಕಿಯರ ಬಗ್ಗೆ ಗೌರವವಿಲ್ಲದೆ ಹಾಗೂ ಪರಿಜ್ಞಾನವಿಲ್ಲದೆ ಮಾತನಾಡಿರುವ ಮಾತು ಸಚಿವ ಸ್ಥಾನದ ಘನತೆ ಹಾಗೂ ಶಾಸಕ ಸ್ಥಾನದ ಗೌರವವನ್ನು ಹಾಳು ಮಾಡಿದೆ.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಎಸ್. ಮನೋಹರ್, ಜಿ. ಜನಾರ್ದನ್, ಎ. ಆನಂದ್, ಇ. ಶೇಖರ್, ಪುಟ್ಟರಾಜು, ಉಮೇಶ್, ಶಶಿಭೂಷಣ್, ಮಹೇಶ್, ಆದಿತ್ಯ, ಚಂದ್ರು, ಮಾಧವ, ಶೀಲಾ ಹಾಗೂ ಪಕ್ಷದ ಮುಖಂಡರುಗಳು ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.