ಸುಧಾಕರ್ ತಲೆ ದಂಡಕ್ಕೆ ಎಚ್‌ಡಿಕೆ ಆಗ್ರಹ

ಬೆಂಗಳೂರು,ನ.೫- ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಅವಳಿ ಮಕ್ಕಳ ಸಾವನ್ನು ಸಮರ್ಥಿಕೊಳ್ಳುವ ರೀತಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಈ ಘಟನೆಗೆ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು, ಸಚಿವರಿಗೆ ಆ ನೈತಿಕತೆ ಇಲ್ಲದಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿರವರು ಸಚಿವ ಸುಧಾಕರ್‌ರವರನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಸಚಿವ ಸುಧಾಕರ್‌ರವರೇ ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ಸಾವುಗೇಡಿ ಸರ್ಕಾರದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸಾವಿನ ಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು, ಸಾವುಗಳ ಬಗ್ಗೆ ನಿಮಗೆ ಕೊನೇ ಪಕ್ಷ ಪಶ್ಚಾತ್ತಾಪ ಪಾಪಪ್ರಜ್ಞೆ ಬೇಡವೇ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.ತುಮಕೂರು ಆಸ್ಪತ್ರೆಯಲ್ಲಿ ನಡೆದ ದುರಂತದ ಬಗ್ಗೆ ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು ನಿಮಗೆ ಮನುಷ್ಯತ್ವ ಇದೆಯೇ ಎಂದು ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ ಅವರು, ನಿಮ್ಮ ವೈಫಲ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ, ಈ ಬಾಣಂತಿ ಆಕೆಯ ಎರಡು ಮಕ್ಕಳ ದಾರುಣ ಸಾವನ್ನು ಸಂಭ್ರಮಿಸುತ್ತಿದ್ದೀರಾ. ನಿಮ್ಮ ವಿಕೃತ ಮನಸ್ಸಿಗೆ ಧಿಕ್ಕಾರ ಎಂದು ಕುಮಾರಸ್ವಾಮಿ ತುಮಕೂರು ಆಸ್ಪತ್ರೆಯಲ್ಲಿ ಆ ವೈದ್ಯ ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ ದರ್ಪದಿಂದ ಸಾವಾದವು,ಆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರು ಮಾಡಬಹುದಾ? ಇನ್ನು ಆರೇ ತಿಂಗಳು ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಕೋವಿಡ್ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೆ ಚೆನ್ನಾಗಿ ಗೊತ್ತು, ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ೩೬ ಜನರ ಸಾವಿಗೆ ಕಾರಣರಾಗಿದ್ದು ನಿಮ್ಮ ವೈಫಲ್ಯವಲ್ಲವೇ? ಎಂದಿರುವ.ಕುಮಾರಸ್ವಾಮಿ, ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನೂ ಅಲ್ಲ, ಜನಿಸಿ ಕ್ಷಣದಲ್ಲೇ ಉಸಿರು ಬಿಟ್ಟ ಆ ಕಂದಮ್ಮಗಳ ಮರಣ ನಿಮ್ಮ ಅಂತಃಕರಣವನ್ನು ಕಲಕಿಲ್ಲವೇ ಸಚಿವರೇ? ನಾನು ಕಂಡ ಅತ್ಯಂತ ಕ್ರೌರ್ಯವಿದು, ಅದನ್ನು ನಾನು ಪ್ರಶ್ನಿಸಿದ್ದು ತಪ್ಪಾ ಎಂದು ಕುಮಾರಸ್ವಾಮಿ ಖಾರವಾಗಿ ತಿಳಿಸಿದ್ದಾರೆ.ಕಾಸಿಗಾಗಿ ಹುದ್ದೆ ಇದು ನಿಮ್ಮ ಸುಲಿಗೆ ನೀತಿ, ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ, ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಕಳ್ಳ ಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ ಎಂದು ನೆನಪಿರಲಿ ಸಚಿವರೇ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಗುತ್ತಿಗೆದಾರರಾದ ಕೆಂಪಣ್ಣ ನಿಮ್ಮ ಪರ್ಸಂಟೇಜ್ ವ್ಯವಹಾರದ ಬಗ್ಗೆ ಮಾತನಾಡಿದ್ದರು. ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮಕ್ಕೆ ಬರಬೇಕಿತ್ತು ಅವರನ್ನು ಬರದಂತೆ ತಡೆಯಲು ಏನೆಲ್ಲ ಹೈಡ್ರಾಮ ನಡೆಸಿದ್ದೀರಿ? ಯಾರ ಕಾಲು ಹಿಡಿದಿರಿ ಎಂಬ ಮಾಹಿತಿ ನನಗೂ ಇದೆ, ಗಾಜಿನ ಮನೆಯಲ್ಲಿ ಕೂತು ಗೋಲಿಯಾಟವಾಡುವುದು ಕ್ಷೇಮವಲ್ಲ ಸಚಿವರೇ ಎಂದು ಕುಮಾರಸ್ವಾಮಿ ಟ್ವಿmರ್‌ನಲ್ಲಿ ತಿಳಿಸಿದ್ದಾರೆ.