ಸುದ್ದಿ ನಿರೂಪಕನಿಗೆ ಚೂರಿ ಇರಿತ

ಟೆಹ್ರಾನ್ (ಇರಾನ್), ಮಾ.೩೦- ನ್ಯೂಸ್ ಚಾನೆಲ್‌ನ ನಿರೂಪಕನಿಗೆ ಗುಂಪೊಂದು ಚೂರಿಯಿಂದ ಇರಿದ ಘಟನೆ ಇರಾನ್‌ನಲ್ಲಿ ನಡೆದಿದೆ.
ಪೌರಿಯಾ ಝೆರಾತಿ (೩೬) ಇರಿತಕ್ಕೊಳಗಾದ ಪತ್ರಕರ್ತ. ಪೌರಿಯಾ ಲಂಡನ್ ಮೂಲದ ಇರಾನ್ ಇಂಟರ್‌ನ್ಯಾಷನಲ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲದೆ ಇರಾನ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳ ಕುರಿತು ೨೦೨೨ ರಲ್ಲಿ ವ್ಯಾಪಕವಾಗಿ ವರದಿ ಮಾಡಿತ್ತು. ಇದೇ ಕಾರಣಕ್ಕಾಗಿ ಗುಂಪೊಂದು ಚೂರಿಯಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ಇರಿತದ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ. ಸದ್ಯ ಇರಿತಕ್ಕೊಳಗಾಗಿರುವ ಪೌರಿಯಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ೨೦೨೨ರಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯ ಬಗ್ಗೆ ಚಾನೆಲ್ ವ್ಯಾಪಕವಾಗಿ ಸುದ್ದಿ ಪ್ರಕಟಿಸಿ, ಅಲ್ಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.