ಸುದೀಪ್ ಚಿತ್ರ ನಿಷೇಧ ಕೋರಿ ಆಯೋಗಕ್ಕೆ ವಕೀಲರ ಮನವಿ

ಶಿವಮೊಗ್ಗ,ಏ.೬-ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿರುವ ನಟ ಸುದೀಪ್ ಅವರ ಚಿತ್ರಗಳು, ಶೋ ಗಳನ್ನು ಚುನಾವಣೆ ಮುಗಿಯುವ ತನಕ ನಿಷೇಧಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ವಕೀಲರೊಬ್ಬರು ಮನವಿ ಮಾಡಿದ್ದಾರೆ.
ಮೇ ೧೦ ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಿಜೆಪಿ ಕಣಕ್ಕಿಳಿಸಿದ ಒಂದು ದಿನದ ನಂತರ, ಶಿವಮೊಗ್ಗ ವಕೀಲರೊಬ್ಬರು ಸುದೀಪ್ ಚಿತ್ರ ಪ್ರದರ್ಶನ ನಿಷೇಧಕ್ಕೆ ಕೋರಿ ಮನವಿ ಮಾಡಿದ್ದಾರೆ.
ಮೇ ೧೩ ರಂದು ಚುನಾವಣೆ ಮುಗಿಯುವವರೆಗೆ ಕಿಚ್ಚ ಸುದೀಪ್ ಅವರ ಚಲನಚಿತ್ರಗಳ ಪ್ರದರ್ಶನ ಮಾಡದಂತೆ ನಿಷೇಧಿಸುವಂತೆ ಕೋರಿ ಶಿವಮೊಗ್ಗ ಮೂಲದ ವಕೀಲ ಕೆಪಿ ಶ್ರಿಪಾಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿರುವ ವಕೀಲರು, ಸುದೀಪ್ ಅವರ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳು ನೇರವಾಗಿ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಹೀಗಾಗಿ ಅವುಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಅನ್ವೇಷಣೆಯಲ್ಲಿ, ಆಡಳಿತಾರೂಢ ಬಿಜೆಪಿ ಪ್ರಚಾರದ ಹಾದಿಯಲ್ಲಿ ರಾಜಕೀಯ ಪ್ರಮುಖರನ್ನು ನಿಯೋಜಿಸುವುದು ಮಾತ್ರವಲ್ಲದೆ ನಟರನ್ನು ತನ್ನತ್ತ ಸೆಳೆಯಿತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಸರಿ ಪಕ್ಷ ತನ್ನ ಸ್ಟಾರ್ ಪ್ರಚಾರಕರಾಗಿ ಹಲವಾರು ಕನ್ನಡ ನಟರನ್ನು ಸಂಪರ್ಕಿಸಿದೆ ಎನ್ನಲಾಗಿದೆ.
ಮೇ ೧೦ ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ ೧೩ ರಂದು ಫಲಿತಾಂಶ ಪ್ರಕಟವಾಗಲಿದೆ.