ಸುತ್ತೂರು,ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಚಿವ ಭಗವಂತ ಖೂಬಾ

ಬೀದರ,ಡಿ 3: ನಗರಕ್ಕೆ ಆಗಮಿಸಿದ ಸುತ್ತೂರಿನ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಅವರ ನಿವಾಸಕ್ಕೆಬರಮಾಡಿಕೊಂಡು, ಸಚಿವರು ದಂಪತಿ ಸಮೇತ ಪೂಜ್ಯರ ಪಾದಪೂಜೆಯನ್ನು ಮಾಡಿಕೊಂಡು ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಪೂಜ್ಯರ ಗಮನಕ್ಕೆ ತಂದು, ಜಿಲ್ಲೆಯಲ್ಲಿ ನೀರಾವರಿಗೆ ಒತ್ತು ನೀಡುತ್ತಿದ್ದೇನೆ. ನಮ್ಮ ಸರ್ಕಾರದಲ್ಲಿ ಔರಾದ 36 ಕೆರೆಗಳು ತುಂಬುವ ಯೋಜನೆ ಹಾಗೂ ಮೇಹಕರ ಏತ ನೀರಾವರಿ ಯೋಜನೆಗಳು ಮಂಜೂರಾತಿ ಮಾಡಿಸಿಕೊಂಡಿದ್ದೇನೆ, ಏನಾದರೂ ಮಾಡಿ ನಮ್ಮ ಜಿಲ್ಲೆಯ ರೈತರಿಗೆ ಉತ್ತಮ ನೀರಾವರಿ ಸೌಲಭ್ಯ ಮಾಡಿಕೊಡಬೇಕೆಂದು ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದು ಪೂಜ್ಯರಿಗೆ ತಿಳಿಸಿದರು. ಈ ವಿಷಯ ಆಲಿಸಿದ ಪೂಜ್ಯರು ಸಹ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು, ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೆಕೆಂದು ಸಚಿವರಿಗೆ ಸಲಹೆಯನ್ನು ನೀಡಿದರು. ನೀರಾವರಿ ಯೋಜನೆಗಳಿಂದ ಮಾತ್ರ ರೈತರ ಕಲ್ಯಾಣ ಸಾಧ್ಯ ಎಂದು ತಿಳಿಸಿದರು.
ತುಮಕೂರು ಸಿದ್ಧಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿಯವರಿಗೆ ಸಹ ಭಕ್ತಿಪೂರ್ವಕವಾಗಿ ಬರಮಾಡಿಕೊಂಡು, ಪೂಜ್ಯರ ಪಾದಪೂಜೆಯನ್ನು ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಚಿವರು ಪೂಜ್ಯರ ಗಮನಕ್ಕೆ ತಂದರು.
ಪೂಜ್ಯರು ಮಾತನಾಡಿ ಮೋದಿಯವರ ನೇತೃತ್ವದಲ್ಲಿ ದೇಶವು ಅಭಿವೃದ್ದಿ ಪಥದತ್ತ ಸಾಗುತ್ತಿದೆ, ಬೀದರ ಕ್ಷೇತ್ರದಲ್ಲಿಯೂ ಹಲವಾರು ಅಭಿವೃದ್ದಿ ಕಾರ್ಯಗಳು ಆಗಿರುವುದು ನೋಡಿದರೆ ಸಂತೋಷವಾಗುತ್ತದೆ. ಹೀಗೆ ಮುಂದೆಯೂ ಕ್ಷೇತ್ರದ ಜನತೆಯ ಸೇವೆ ಮಾಡುವಂತರಾಗಿರಿ ಎಂದು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಗಣಪತರಾವ ಖೂಬಾ, ಶರಣಪ್ಪ ಮಿಠಾರೆ, ಅಣೆಪ್ಪ ಖಾನಾಪೂರೆ, ಪ್ರಶಾಂತ ಹೋಳಸಮುದ್ರ, ಗುರುನಾಥ ಕೊಳ್ಳುರ ಇತರರು ಉಪಸ್ಥಿತರಿದ್ದರು