ಸುಡು ಬಿಸಿಲಿನ ತಾಪಕ್ಕೆ ಬಳಲಿದ ಸಾರ್ವಜನಿಕರು ಕಲ್ಲಂಗಡಿ ಹಣ್ಣಿನ ವ್ಯಾಪಾರ ವಹಿವಾಟು ಜೋರು

ಕೋಲಾರ,ಫೆ,೨೫-ಈ ಬಾರಿಯೂ ರಣ ಬಿಸಿಲು ಫೆಬ್ರವರಿ ಮಾಹೆಯಲ್ಲಿಯೇ ಪ್ರಾರಂಭವಾಗಿದ್ದು ಮನೆಯ ಹೊರಗೆ ತಲೆ ಇಟ್ಟರೆ ಜನರ ನೆತ್ತಿ ಸುಡುವಂತಾಗಿದೆ. ಸೂರ್ಯೋದಯವಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರೋದಕ್ಕೂ ಯೋಚಿಸುವ ಪರಿಸ್ಥಿತಿ ಎದುರಾಗಿದೆ, ಹಾಗಾಗಿ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿರುವ ಜನರು ದಣಿವಾರಿಸಿಕೊಳ್ಳಲು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.
ಒಂದೆಡೆ ನೆತ್ತಿ ಸುಡುವಂತೆ ಧಗಧಗಿಸುತ್ತಿರುವ ಸೂರ್ಯ, ಮತ್ತೊಂದೆಡೆ ಸೂರ್ಯನ ತಾಪದ ಶಾಪವನ್ನು ತಡೆಯಲಾರದೆ ಕೆಂಪನೆ ಕಲ್ಲಂಗಡಿ ಹಣ್ಣಿನ ಅಂಗಡಿಗೆ ಮುಗಿಬಿದ್ದು ತಿನ್ನುವ ಮೂಲಕ ಧಣಿವಾರಿಸಿ ಕೊಳ್ಳುತ್ತಿರುವ ಜನರನ್ನು ಬರದ ಬೀಡಾಗಿರುವ ಕಂಡು ಕೋಲಾರದ ಬಯಲು ಸೀಮೆ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಕೋಲಾರ ಬರಗಾಲ ಪೀಡಿತ ಪ್ರದೇಶವಾಗಿದ್ದು ಅಂತರ್ಜಲ ಮಟ್ಟ ೧೫೦೦ ಅಡಿ ಪಾತಳ ಮುಟ್ಟುತ್ತಿದ್ದು ಜೀವ ಉಳಿಸಿ ಕೊಳ್ಳಲು ಕಳೆದ ಎರಡು ವರ್ಷಗಳಿಂದ ಕೆ.ಸಿ. ವ್ಯಾಲಿಯ ಸಂಸ್ಕರಣ ನೀರನ್ನು ಬತ್ತಿ ಹೋಗಿರುವ ಕೆರೆಗಳಿಗೆ ತುಂಭಿಸಿ ಕೊಳ್ಳುತ್ತಿದೆ ಇಡೀ ವರ್ಷ ಪೂರ್ತಿ ಸುಡುವ ಬಿಸಿಲು, ಧಗ ದಹಿಸುವ ಸೂರ್ಯನ ತಾಪವನ್ನು ಸಹಿತ ಜನರ ನೆತ್ತಿ ಸುಡುತ್ತಿರುತ್ತಾನೆ.


ಕಳೆದ ಸಾಲಿನಲ್ಲಿ ಮಳೆ ಬಿದ್ದು ಹಲವು ತಿಂಗಳು ಕಳೆದಿದೆ, ಕೆರೆಗಳಲ್ಲಿದ್ದ ನೀರೆಲ್ಲಾ ಖಾಲಿಯಾಗಿ ಭೂಮಿ ಕಾದ ಕೆಂಡದಂತಾಗಿದೆ. ಹೀಗಿರುವಾಗ ಫೆಬ್ರವರಿ ಮಾಸದ ಕೊನೆಯ ವಾರದೆಲ್ಲಿ ಬಿಸಲಿನ ತೀವ್ರತೆ ಹೆಚ್ಚಾಗಿದೆ, ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿಹೆಚ್ಚು ತಾಪಮಾನ ೩೪-೩೮ ಡಿಗ್ರಿ ದಾಖಲಾಗಿದೆ.
ಜಿಲ್ಲೆಯಲ್ಲಿ ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಎಳನೀರು, ಮಜ್ಜಿಗೆಯಂತ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್‌ಗಳು, ಐಸ್ ಕ್ರೀಮ್ ಪಾಲರ್‌ಗಳ ಅಂಗಡಿಗಳು ಜೋರಾಗಿದೆ, ಎಲ್ಲಾ ಕಡೆ ಕೂಡಾ ಜನರು ಮುಗಿಬಿದ್ದು, ಬಿಸಿಲಲ್ಲಿ ಕಲ್ಲಂಗಡಿ ಸವಿಯುತ್ತಾ ಜನ ಬಿಸಿಲಿನಿಂದ ಬೆಂದು ಕೊಂಚ ನಿಟ್ಟುಸಿರುವ ಬಿಡುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ಏರಿಕೆಯಾಗಿದೆ, ಈ ವರ್ಷ ಉತ್ತಮ ಮಳೆಯೂ ಆಗಿಲ್ಲ, ಹಾಗಾಗಿ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿ ತಾಪಪಾನ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶಕ್ಕಿಂತ ಸ್ಥಳೀಯವಾಗಿ ಹೆಚ್ಚು ಪ್ರದೇಶಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನ ಬೆಳೆಯಲಾಗಿದೆ. ಹಾಗಾಗಿ ಕಡಿಮೆ ಬೆಲೆಗೆ ಅಂದರೆ ಒಂದು ಕೆ.ಜಿ. ರೂ ೧೮ ರಿಂದ ರೂ ೨೦ ವರೆಗೆ ಕಲ್ಲಂಗಡಿನನ್ನು ರೈತರಿಂದ ಪಡೆಯುತ್ತಿರು ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಒಂದು ಕೆ.ಜಿ. ೨೫ ರಿಂದ ೩೦ ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗಿ ಏನಾದರೂ ಒಂದಷ್ಟು ಧಣಿವಾರಿಸಿಕೊಳ್ಳಲು ಸಿಕ್ಕರೆ ಸಾಕು ಎನ್ನುವ ಸ್ಥಿತಿ ಇದೆ. ಅದಕ್ಕಾಗಿಯೇ ಕೋಲಾರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀ ಕಿ.ಮೀ ವ್ಯಾಪ್ತಿಯಲ್ಲಿ ಒಂದು, ಎರಡು ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಟೆಂಟ್( ಬಿಡಾರ) ಹಾಕಿಕೊಂಡು ವ್ಯಾಪಾರ ಶುರು ಮಾಡಿದ್ದಾರೆ. ಎಲ್ಲಾ ವ್ಯಾಪಾರಸ್ಥರಿಗೂ ಒಳ್ಳೆಯ ವ್ಯಾಪಾರ ಜೊತೆಗೆ ಒಂದಷ್ಟು ಆದಾಯ ಸಿಗುತ್ತಿದೆ ಅನ್ನೋ ಖುಷಿ ವ್ಯಾಪಾರಸ್ಥರದ್ದಾಗಿದೆ.

.