ಖಾರ್ತೋಮ್ (ಸುಡಾನ್), ಜೂ.೧೮- ಅರೆಸೈನಿಕ ಪಡೆ ಹಾಗೂ ಮಿಲಿಟರಿ ನಡುವಿನ ವೈಮನಸ್ಸಿನಿಂದ ಹದಗೆಟ್ಟಿರುವ ಸುಡಾನ್‌ನ ಆಂತರಿಕ ಕಲಹ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ ಶನಿವಾರ ಖಾರ್ತೋಮ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ೧೭ ಮಂದಿ ಮೃತಪಟ್ಟ ಘಟನೆ ನಡೆದಿದೆ.
ಖಾರ್ತೋಮ್‌ನ ಯರ್ಮೋಕ್ ಜಿಲ್ಲೆಯಲ್ಲಿ ಈ ಭೀಕರ ದಾಳಿ ನಡೆದಿದ್ದು, ಘಟನೆಯಲ್ಲಿ ೨೫ಕ್ಕೂ ಹೆಚ್ಚಿನ ಮನೆಗಳು ಧ್ವಂಸಗೊಂಡಿವೆ. ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ವಿರುದ್ಧ ದಾಳಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಉನ್ನತ ಸೇನಾ ಜನರಲ್ ಬೆದರಿಕೆ ಹಾಕಿದ ಒಂದು ದಿನದ ಒಳಗೆ ಈ ದಾಳಿ ನಡೆಸಲಾಗಿದೆ. ಜೂನ್ ಆರಂಭದಲ್ಲಿ ಆರ್‌ಎಸ್‌ಎಫ್ ರಾಜಧಾನಿ ಖಾರ್ತೋಮ್‌ನ ಯರ್ಮೌಕ್‌ನ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದು, ಇದು ಶಸ್ತ್ರಾಸ್ತ್ರ ಉತ್ಪಾದನಾ ಸೌಲಭ್ಯವನ್ನು ಕೂಡ ಹೊಂದಿದೆ.
ಆದರೆ ಶನಿವಾರ ಸೌದಿ ಅರೇಬಿಯಾ ಹಾಗೂ ಅಮೆರಿಕಾದ ನೇತೃತ್ವದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ೭೨ ಗಂಟೆಗಳ ಕದನ ವಿರಾಮಕ್ಕೆ ಎರಡೂ ಕಡೆಯ ನಾಯಕರು ಒಪ್ಪಿಗೆ ಸೂಚಿಸಿದ್ದರು. ಆದರೆ ಇದರ ಹೊರತಾಗಿಯೂ ಇದೀಗ ಮಿಲಿಟರಿ ಪಡೆಯು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ಪ್ರದೇಶದ ಮೇಲೆ ವಾಯುದಾಳಿ ನಡೆಸಿದೆ.
ಇನ್ನು ಎಪ್ರಿಲ್‌ನಲ್ಲಿ ಆರಂಭವಾದ ಸುಡಾನ್ ಸೈನ್ಯ ಪಡೆ ಹಾಗೂ ಆರ್‌ಎಸ್‌ಎಫ್ ನಡುವಿನ ಕಾದಾಟದಲ್ಲಿ ಇಂದಿನ ವರೆಗೆ ಮೃತಪಟ್ಟವರ ಅಧಿಕೃತ ಅಂಕಿ-ಅಂಶ ತಿಳಿದು ಬಂದಿಲ್ಲ.
ಆದರೆ ಮೂಲಗಳ ಪ್ರಕಾರ ಘಟನೆಯಲ್ಲಿ ಇಲ್ಲಿಯ ವರೆಗೆ ಸುಮಾರು ೧೦೦೦ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಿಶ್ವಸಂಸ್ಥೆ ಪ್ರಕಾರ ಸುಡಾನ್ ದೇಶದೊಳಗೆ ಸರಿಸುಮಾರು ೨೨ ಲಕ್ಷ ಜನರು ಸ್ಥಳಾಂತರಗೊಂಡಿದ್ದು, ೫ ಲಕ್ಷಕ್ಕೂ ಅಧಿಕರ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಅದೂ ಅಲ್ಲದೆ ಇದುವರೆಗೆ ಹಲವು ಕದನ ವಿರಾಮಗಳನ್ನು ಘೋಷಿಸಲಾಗಿದ್ದರೂ ಎರಡೂ ಕಡೆಯ ನಾಯಕರು ಇದಕ್ಕೆ ಸೂಕ್ತ ರೀತಿಯಲ್ಲಿ ಗೌರವ ನೀಡಿಲ್ಲ. ಶನಿವಾರ ನಡೆದ ದಾಳಿ ಇದಕ್ಕೆ ಮತ್ತೊಂದು ಉದಾಹರಣೆ ಎನ್ನಬಹುದು. ಒಟ್ಟಿನಲ್ಲಿ ಸುಡಾನ್‌ನಲ್ಲಿ ಪರಿಸ್ಥಿತಿ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಸೂಚನೆ ಲಭಿಸುತ್ತಿಲ್ಲ.