
ಕಾರ್ಟೋಮ್ (ಸುಡಾನ್), ಎ.೨೫- ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಭೀಕರ ಸಂಘರ್ಷದ ಬಳಿಕ ಇದೀಗ ಮೂರು ದಿನಗಳ ಕದನ ವಿರಾಮಕ್ಕೆ ಸುಡಾನ್‌ನ ಯುದ್ಧನಿರತ ಜನರಲ್‌ಗಳು ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರಕಟಿಸಿದ್ದಾರೆ. ಕದನದಲ್ಲಿ ಈವರೆಗೆ ೪೨೭ ಮಂದಿ ಮೃತಪಟ್ಟು, ೩೭೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.
ಯುದ್ಧಪೀಡಿತ ಸುಡಾನ್‌ನಿಂದ ವಿದೇಶಿಯರು ಸಾಮೂಹಿಕವಾಗಿ ನಿರ್ಗಮಿಸುತ್ತಿದ್ದಾರೆ. ಈ ಹಿಂದೆ ಕದನ ವಿರಾಮಕ್ಕೆ ನಡೆಸಿದ್ದ ಪ್ರಯತ್ನಗಳು ಫಲ ನೀಡಿರಲಿಲ್ಲ. ಆದರೆ ಕಳೆದ ೪೮ ಗಂಟೆಗಳ ತೀವ್ರ ಸಂಧಾನ ಮಾತುಕತೆಗಳ ಬಳಿಕ ಸುಡಾನ್‌ನ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರೆಸ್‌ಎಫ್) ಏಪ್ರಿಲ್ ೨೪ರ ಮಧ್ಯರಾತ್ರಿಯಿಂದ ೭೨ ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಕದನ ವಿರಾಮ ಜಾರಿಗೆ ಒಪ್ಪಿಕೊಂಡಿವೆ ಎಂದು ಬ್ಲಿಂಕೇನ್ ವಿವರಿಸಿದ್ದಾರೆ. ಕದನ ವಿರಾಮ ಜಾರಿಗೆ ಬರುವ ಸ್ವಲ್ಪ ಮೊದಲು ಬ್ಲಿಂಕೆನ್ ಈ ಹೇಳಿಕೆ ನೀಡಿದ್ದಾರೆ. ಸುಡಾನ್ ಸೇನೆ ಹಾಗೂ ಪ್ರತಿಸ್ಪರ್ಧಿಗಳ ನಡುವೆ ರಾಜಧಾನಿ ಖರ್ಟೂಮ್ ಮತ್ತು ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಡಾನ್ ಪ್ರಪಾತಕ್ಕೆ ಕುಸಿಯುವ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದರು. ಸೇನಾ ಮುಖ್ಯಸ್ಥ ಅಬ್ದುಲ್ ಫತೇಹ್ ಅಲ್ ಬುರ್ಹಾನ್ ಬೆಂಬಲಿಗರು ಮತ್ತು ಅರೆ ಮಿಲಿಟರಿ ಪಡೆಯಾದ ರ್ಯಾಪಿಡ್ ಸರ್ಪೋರ್ಟ್ ಫೋರ್ಸಸ್‌ನ ಮುಖ್ಯಸ್ಥರಾದ ಹಾಗೂ ಸೇನೆಯ ಮಾಜಿ ಉಪ ಮುಖ್ಯಸ್ಥ ಮೊಹಮದ್ ಹಮ್ದನ್ ಡಗ್ಲೊ ಬೆಂಬಲಿಗರ ನಡುವೆ ಭೀಕರ ಕದನ ಏರ್ಪಟ್ಟಿದೆ. ಈ ಮಧ್ಯೆ ಸಂಘರ್ಷ ತೀವ್ರಗೊಂಡಿರುವುದರಿಂದ ಶಾಲೆಗಳಲ್ಲಿ ಮತ್ತು ಶಿಶುವಿಹಾರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳನ್ನು ಅಲ್ಲಿಂದ ತುರ್ತಾಗಿ ಸ್ಥಳಾಂತರಗೊಳಿಸುವ ಅಗತ್ಯವಿದೆ. ಸುಡಾನ್‌ನಲ್ಲಿ ಸಂಘರ್ಷ ಭುಗಿಲೇಳುವ ಮುನ್ನವೇ ಆ ದೇಶಕ್ಕೆ ಮಾನವೀಯ ನೆರವಿನ ಅಗತ್ಯ ಹೆಚ್ಚಿತ್ತು. ಸುಮಾರು ಶೇ. ೭೫ ರಷ್ಟು ಮಕ್ಕಳು ತೀವ್ರ ಬಡತನದ ಅಂಚಿನಲ್ಲಿದ್ದಾರೆ ಎಂದು ಯುನಿಸೆಫ್ ಹೇಳಿದೆ.