ಸುಡಾನ್‌ನಲ್ಲಿ ಹಿಂಸಾಚಾರ ಮತ್ತಷ್ಟು ತೀವ್ರ: ಭಾರತೀಯ ಮಹಿಳೆ ಮೃತ್ಯು

ಖರ್ಟೌಮ್, ಎ.೧೭- ಸುಡಾನ್‌ನಲ್ಲಿ ಸೇನಾ ಪಡೆಗಳು ಹಾಗೂ ನಾಗರಿಕರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ವೇಳೆ ಘರ್ಷಣೆಯ ವೇಳೆ ಗುಂಡೇಟಿನಿಂದ ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ಎಂಬ ಮಹಿಳೆ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಘಟನೆಯಲ್ಲಿ ಒಟ್ಟಾರೆಯಾಗಿ ೨೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ನಾವು ಮೃತಳ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಮೃತಳ ಅಂತ್ಯಕ್ರಿಯೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ವೈದ್ಯಕೀಯ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ಖರ್ಟೌಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಆಗಸ್ಟಿನ್ ಸುಡಾನ್‌ನ ಬೇಳೆಕಾಳು ಸಮೂಹ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪ್ರಜಾಪ್ರಭುತ್ವಕ್ಕಾಗಿ ಸೂಡಾನ್‌ನಲ್ಲಿ ಅಂತರ್ಯುದ್ಧ ಶುರುವಾಗಿದ್ದು, ಸೂಡಾನ್‌ನ ಸೇನಾಪಡೆ ಹಾಗೂ ಅರೆ ಸೇನಾ ಪಡೆಗಳು ರಾಜಧಾನಿ ಖರ್ಟೌಮ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಕಾಳಗದಲ್ಲಿ ತೊಡಗಿವೆ. ಈ ಕಾಳಗದಲ್ಲಿ ಶನಿವಾರ ಮಧ್ಯರಾತ್ರಿಯವರೆಗೆ ಕನಿಷ್ಠ ೨೭ ಮಂದಿ ಮೃತಪಟ್ಟಿದ್ದು, ೧೮೦ ಮಂದಿ ಗಾಯಾಳುಗಳಾಗಿದ್ದಾರೆ ಎಂದು ಸೂಡಾನ್ ದೇಶದ ವೈದ್ಯರ ಒಕ್ಕೂಟ ತಿಳಿಸಿದೆ. ಆದರೆ, ಪಶ್ಚಿಮ ಪ್ರಾಂತ್ಯದ ಡರ್ಫುರ್ ಹಾಗೂ ಉತ್ತರ ಪ್ರಾಂತ್ಯದ ಪಟ್ಟಣವಾದ ಮೆರೋವ್‌ನಲ್ಲಿ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಯ ಯೋಧರು ಸೇರಿದಂತೆ ಹಲವಾರು ಮಂದಿ ಗಾಯಾಳುಗಳಾಗಿದ್ದು, ಅವರ ಲೆಕ್ಕವನ್ನು ಮಾಡಲಾಗಿಲ್ಲ ಎಂದೂ ಸುಡಾನ್ ವೈದ್ಯರ ಒಕ್ಕೂಟ ಹೇಳಿದೆ. ಹಲವಾರು ತಿಂಗಳಿನಿಂದ ಸುಡಾನ್ ಸಶಸ್ತ್ರ ಪಡೆಗಳು ಹಾಗೂ ಕ್ಷಿಪ್ರ ನೆರವು ಪಡೆ ಗುಂಪುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಂಘರ್ಷ ಭುಗಿಲೆದ್ದಿದೆ.
ವಿಮಾನ ಸಂಚಾರ ಸ್ಥಗಿತ
ಸುಡಾನ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗುತ್ತಿದ್ದ ಸೌದಿ ಅರೆಬಿಯಾದ ಪ್ರಯಾಣಿಕರ ವಿಮಾನದತ್ತ ಗುಂಡು ಹಾರಿದ ಘಟನೆಯ ಬಳಿಕ ಸುಡಾನ್‌ನಿಂದ ಹೊರಡುವ ಎಲ್ಲಾ ಪ್ರಯಾಣಿಕರ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ. ಸೌದಿ ಅರೆಬಿಯಾದತ್ತ ಹೊರಟಿದ್ದ ಏರ್‍ಬಸ್ ಎ೩೩೦ ವಿಮಾನದತ್ತ ಗುಂಡು ಹಾರಾಟ ನಡೆದ ಬಳಿಕ ಸುಡಾನ್‌ನಿಂದ ತೆರಳುವ ಎಲ್ಲಾ ಸೌದಿ ಅರೆಬಿಯಾ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿಮಾನದಲ್ಲಿದ್ದವರನ್ನು ಸೌದಿ ರಾಯಭಾರ ಕಚೇರಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸುಡಾನ್‌ನಲ್ಲಿನ ಸೌದಿ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.