ಸುಡಾನ್‌ನಲ್ಲಿ ನಿಲ್ಲದ ಕದನ ಹಿಂಸಾಚಾರ

ಖಾರ್ತೋಮ್ (ಸುಡಾನ್), ಮೇ ೨೩- ಸುಡಾನ್‌ನಲ್ಲಿ ಇಬ್ಬರು ಮಿಲಿಟರಿ ಅಧಿಕಾರಿಗಳ ಬೆಂಬಲಿಗರ ನಡುವಿನ ಕಲಹ ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದೀಗ ನಿನ್ನೆ ಹೊಸ ಕದನ ವಿರಾಮ ಘೋಷಣೆಯಾಗಿರುವ ನಡುವೆಯೂ ಹಲವೆಡೆ ವಾಯುದಾಳಿ ಹಾಗೂ ಸಂಘರ್ಷಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.
ಹೊಸ ಏಳು ದಿನಗಳ ಕದನ ವಿರಾಮ ನಿನ್ನೆ ಆರಂಭವಾಗಿದ್ದು, ಪರಿಸ್ಥಿತಿ ಕೊಂಚ ಸುಧಾರಿಸುವ ಭರವಸೆ ಮೂಡಿತ್ತು. ಅದರಲ್ಲೂ ಅಮೆರಿಕಾ ಹಾಗೂ ಸೌದಿ ಅರೇಬಿಯಾದ ನೇತೃತ್ವದಲ್ಲಿ ಹೊಸ ಕದನ ವಿರಾಮ ನಡೆದಿತ್ತು. ಇದು ಸಹಜವಾಗಿಯೇ ನಾಗರಿಕರಲ್ಲಿ ಶಾಂತಿಯ ಹೊಸ ಆಶಾಕಿರಣ ಮೂಡಿಸಿತ್ತು. ಆದರೆ ಇದರ ನಡುವೆಯೂ ಹಲವೆಡೆ ವಾಯುದಾಳಿ ನಡೆದಿದ್ದು, ನಷ್ಟ ಉಂಟಾಗಿದೆ. ಅಲ್ಲದೆ ಸಂಘರ್ಷದ ಮುಂದುವರೆದಿರುವುದು ನಾಗರಿಕರಲ್ಲಿ ಇದೀಗ ಆತಂಕಕ್ಕೆ ಕಾರಣವಾಗಿದೆ. ಇನ್ನು ಹೊಸ ಒಪ್ಪಂದದ ಕದನ ವಿರಾಮ ಘೋಷನೆಗೆ ಒಂದು ಗಂಟೆಗೂ ಮುನ್ನ ಕ್ಷಿಪ್ರ ಬೆಂಬಲ ಪಡೆ (ಆರ್‌ಎಸ್‌ಎಫ್)ಯ ನಾಯಕ ಜನರಲ್ ಮೊಹಮದ್ ಹಮ್ದಾನ್ ದಗಾಲೊ ಅವರು ತನ್ನ ವಿಡಿಯೋ ಸಂದೇಶದಲ್ಲಿ, ನಾವು ಈ ಮಿಲಿಟರಿ ಆಡಳಿತವನ್ನು ಅಂತ್ಯಗೊಳಿಸುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದರು. ಖಾರ್ಟೂಮ್‌ನ ಅವಳಿ ನಗರಗಳಾದ ಒಮ್‌ಡುರ್‌ಮನ್ ಮತ್ತು ಬಹ್ರಿಯಲ್ಲಿ ಗುಂಡಿನ ದಾಳಿಯನ್ನು ಕೇಳಿರುವುದಾಗಿ ನಾಗರಿಕರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇನ್ನು ಮುಖ್ಯವಾಗಿ ರಾಜಧಾನಿ ಖಾರ್ತೋಮ್‌ನಲ್ಲಿ ಹಿಂಸಾಚಾರ ನಡೆಯುತ್ತಿದೆ ಎನ್ನಲಾಗಿದೆ. ಐದು ವಾರಗಳ ಹಿಂದೆ ಆರಂಭವಾದ ಸೈನ್ಯದ ನಾಯಕರು ಮತ್ತು ಅರೆಸೈನಿಕ ಬಣದ ನಡುವಿನ ಅಧಿಕಾರದ ಹೋರಾಟವು ಬಳಿಕ ಹಿಂಸಾಚಾರದ ರೂಪ ಪಡೆದುಕೊಂಡಿದ್ದು, ಹಲವು ದೇಶಗಳು ನಾಗರಿಕರು ಈಗಾಗಲೇ ದೇಶ ಬಿಟ್ಟು ತೆರಳಿದ್ದಾರೆ.