ಸುಜ್ಞಾನದೆಡೆಗೆ ಕರೆದೊಯ್ಯುವ ಶಕ್ತಿಯೇ ಶ್ರೀ ಗುರು :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ನರೇಗಲ್-ಅ.೮;  ಜೀವನವೊಂದು ಸುಂದರವಾದ ಸಂತೆ. ಸಂತೆಯೊಳಗೆ ನೂರಾರು ಚಿಂತೆ. ಆದರೂ ನಗು ನಗುತ್ತಾ ಬಾಳಬೇಕು. ಗುರು ಎಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಅಜ್ಞಾನ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಶ್ರೀ ಗುರು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ನರೇಗಲ್ಲ ರಸ್ತೆಯಲ್ಲಿರುವ ಅಬ್ಬಿಗೇರಿ ಹಿರೇಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಲಿಂ.ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳವರ 3ನೇ ವರುಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಜನ ಮೆಚ್ಚುವಂತಹ ಕೆಲಸ ದೊಡ್ಡದಾದರೆ ದೈವ ಮೆಚ್ಚುವಂತಹ ಕೆಲಸ ಅದಕ್ಕಿಂತಲೂ ದೊಡ್ಡದು. ಕನ್ನಡಿ ಸ್ವಚ್ಛವಾಗಿದ್ದರೆ ಪ್ರತಿಬಿಂಬ ಸುಂದರವಾಗಿ ಕಾಣುತ್ತದೆ. ಹಾಗೆಯೇ ಮನಸ್ಸು ಸ್ವಚ್ಛವಾಗಿದ್ದರೆ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ. ಸಮಯ ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಕಾಯ ಕಣ್ಮರೆಯಾದರೂ ಮಾಡಿದ ಸತ್ಕಾರ್ಯಗಳು ಶಾಶ್ವತ. ಬದುಕಲು ಹಣ ಬೇಕು. ಹೊಂದಿಕೊAಡು ಬಾಳಲು ಗುಣ ಬೇಕು. ಲಿಂ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಸದಾ ಕ್ರಿಯಾಶೀಲರಾಗಿ ಬಾಳಿದವರು. ಧರ್ಮ ಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದ್ದನ್ನು ಎಂದಿಗೂ ಮರೆಯಲಾಗದೆಂದ ಅವರು ಅ. 15 ರಿಂದ 24ರವರೆಗೆ ರಾಯಚೂರ ಜಿಲ್ಲೆ ಲಿಂಗಸುಗೂರಿನಲ್ಲಿ ಜರುಗುವ ಶ್ರೀ ರಂಭಾಪುರಿ ಜಗದ್ಗುರುಗಳ 32ನೇ ವರ್ಷದ ದಸರಾ ಧರ್ಮ ಸಮಾರಂಭದಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕೆಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿದ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯರ ಶಿಷ್ಯ ವಾತ್ಸಲ್ಯ ಬಹು ದೊಡ್ಡದು. ಮನುಷ್ಯ ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠ. ಅವರ ಆದರ್ಶಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರಲೆಂದ ಅವರು 2024ನೇ ಸಾಲಿನ ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಅಬ್ಬಿಗೇರಿಯಲ್ಲಿ ಅದ್ದೂರಿಯಾಗಿ ಆಚರಿಸುವ ಸಂಕಲ್ಪ ನಮ್ಮೆಲ್ಲರದು ಆಗಲೆಂದು ಆಶಿಸಿದರು.ನೇತೃತ್ವ ವಹಿಸಿದ ಅಬ್ಬಿಗೇರಿ ಹಿರೇಮಠ ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿನಯ, ಸರಳತೆ, ಸಹಾನುಭೂತಿ ಹಾಗೂ ಸ್ವಾಭಿಮಾನದಂಥ ವೈಶಿಷ್ಠö್ಯಗಳನ್ನು ಹೊಂದಿರುವಾತನೇ ನಿಜವಾದ ಸಂಪನ್ಮೂಲ ವ್ಯಕ್ತಿ. ದೂರ ದೂರ ನೆಟ್ಟ ಗಿಡಗಳು ಬೆಳೆದಂತೆ ಹತ್ತಿರವಾಗುತ್ತವೆ. ಆದರೆ ಮನುಷ್ಯ ಬೆಳೆಯುತ್ತಿದ್ದಂತೆ ಅವರ ಮನಸ್ಸುಗಳು ದೂರವಾಗುತ್ತಾ ಹೋಗುತ್ತವೆ. ಲಿಂ.ಸೋಮಶೇಖರ ಶ್ರೀಗಳವರ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸುವುದೇ ನಮ್ಮೆಲ್ಲರ ಗುರಿಯಾಗಬೇಕಾಗಿದೆ. ಈ ಭಾಗದ ಎಲ್ಲ ಭಕ್ತರ ಸಹಕಾರವಿದ್ದರೆ ಯಾವುದೂ ಅಸಾಧ್ಯ ಇಲ್ಲವೆಂದರು. ಈ ಸಮಾರಂಭದಲ್ಲಿ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಯಲಬುರ್ಗ ಬಸವಲಿಂಗ ಶಿವಾಚಾರ್ಯರು, ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು ಪಾಲ್ಗೊಂಡಿದ್ದರು. ಸಮ್ಮುಖ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿರುವ ಮನುಷ್ಯನಿಗೆ ಇಲ್ಲ. ಬದುಕಿನ ಪುಸ್ತಕ ಎಷ್ಟೇ ಹಳೆಯದಾದರೂ ನೆನಪಿನ ಪುಟಗಳು ಯಾವಾಗಲೂ ಹೊಸದಾಗಿರುತ್ತವೆ. ಲಿಂಗೈಕ್ಯ ಶ್ರೀಗಳವರ ಸಾಧನೆ ಪ್ರಯತ್ನ ಮರೆಯಲು ಸಾಧ್ಯವಾಗದೆಂದರು. ಅಧ್ಯಕ್ಷತೆ ವಹಿಸಿದ ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಸಂಪತ್ತು ಉಳ್ಳವನು ಶ್ರೀಮಂತನಲ್ಲ. ಸಂತಸ ಉಳ್ಳವನೇ ನಿಜವಾದ ಶ್ರೀಮಂತ. ದೇಹಶುದ್ಧಿ ಭಾವ ಶುದ್ಧಿ ಹೊಂದಿ ಕಾರ್ಯ ಮಾಡಿದ ಸೋಮಶೇಖರ ಶಿವಾಚಾರ್ಯರ ನೆನಹು ಭಕ್ತರಿಗೆ ಸದಾ ಹಸಿರು ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಶ್ರೀಮತಿ ರೇಣವ್ವ ಹಳ್ಳಿ ಮೊದಲ್ಗೊಂಡು ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.ಪುಣ್ಯ ಸ್ಮರಣೋತ್ಸವ ನಿಮಿತ್ಯ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಶಿವದೀಕ್ಷಾ ಅಯ್ಯಾಚಾರ ಜರುಗಿತು. ಊರಿನ ಹಿರೇಮಠದಿಂದ ನರೇಗಲ್ಲ ರಸ್ತೆಯಲ್ಲಿರುವ ಅಬ್ಬಿಗೇರಿ ನೂತನ ಹಿರೇಮಠದವರೆಗೆ ಲಿಂ.ಸೋಮಶೇಖರ ಪಲ್ಲಕ್ಕಿ ಮಹೋತ್ಸವ ವಾದ್ಯ ವೈಭವ, ಕಳಸ ಕನ್ನಡಿಯೊಂದಿಗೆ ಸಂಭ್ರಮದಿAದ ಜರುಗಿತು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.