ಸುಜಾತಾ ಮಂಡಲ್ ಖಾನ್ ವಿರುದ್ಧ ಎಫ್‍ಐಆರ್ ದಾಖಲಿಸಿ

ಹೊಸಪೇಟೆ ಏ18: ದಲಿತರನ್ನು ಭಿಕ್ಷುಕರಿಗೆ ಹೋಲಿಕೆ ಮಾಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮಂಡಲ್ ಖಾನ್ ವಿರುದ್ಧ ಎಫ್‍ಐಆರ್ ದಾಖಲಿಸಿ ಕಠಿಣಿಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಎಂದು ಬಿಜೆಪಿ ಎಸ್ಸಿ ಮೋರ್ಚಾದ ಬಳ್ಳಾರಿ ಜಿಲ್ಲಾ ಪ್ರ. ಕಾರ್ಯದರ್ಶಿ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಸ್.ಪಿ. ಲಿಂಬ್ಯಾ ನಾಯ್ಕ ಹೇಳಿದರು.
ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಕುರಿತು ಅವಹೇಳನಕಾರಿಯಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಾತನಾಡಿದ್ದಾರೆ. ದಲಿತರನ್ನು ನೈಜ ಭಿಕ್ಷುಕರು ಎಂದು ಜರಿದಿದ್ದಾರೆ. ಇಂಥವರ ವಿರುದ್ಧ ಅಲ್ಲಿನ ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು. ಜತೆಗೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು. ದಲಿತರನ್ನು ಅವಹೇಳನ ಮಾಡಿರುವುದು ಖಂಡನೀಯ. ಆದರೆ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಕೂಡ ಈ ಪ್ರಕರಣದ ಕುರಿತು ಮೌನಕ್ಕೆ ಶರಣಾಗಿದೆ. ಇಂಥ ಹೇಳಿಕೆಯನ್ನು ಎಲ್ಲರೂ ಖಂಡಿಸಬೇಕು. ದಲಿತರ ಸ್ಥಿತಿ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಅವರನ್ನು ಅಪಮಾನಿಸುವುದು ಸರಿಯಲ್ಲ. ಬಿಜೆಪಿ ದಲಿತರ ಕಲ್ಯಾಣಕ್ಕಾಗಿ ಕ್ರಮವಹಿಸಿದೆ. ದಲಿತ ಸಮುದಾಯಕ್ಕೆ ಬಿಜೆಪಿಯಲ್ಲಿ ದೊರೆತ ಗೌರವ ಬೇರೆಲ್ಲೂ ಸಿಕ್ಕಿಲ್ಲಾ ಎಂದರು.
ಗುಳೆ ಸಮಸ್ಯೆ ತಡೆಗೆ ರಾಜ್ಯ ಸರಕಾರ ಕ್ರಮವಹಿಸಿದೆ. ಅದರಲ್ಲೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮವಹಿಸಲಾಗಿದೆ ಎಂದರು.
ವಿಜಯನಗರ ಜಿಲ್ಲೆಯಲ್ಲಿ ವಲಸೆ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಮತ್ತು ಹೊಸಪೇಟೆ ತಾಲೂಕಿನ ತಾಂಡಾಗಳಿಂದ ಜನ ಮಲೆನಾಡು, ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಕಬ್ಬು ಕಟಾವಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ತಾಂಡಾ ರೋಜಗಾರ್ ಯೋಜನೆಯನ್ನು ತಾಂಡಾ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಾಗುತ್ತಿದೆ. ಜತೆಗೆ ಕಸೂತಿ ಕೆಲಸಗಳು ಕೂಡ ನಡೆಯುತ್ತಿದೆ. ಯುವಕರಿಗೆ ಕೆಲಸ ನೀಡಲು ರೋಜಗಾರ್ ಮಿತ್ರರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಎಸ್ಸಿ ಮೋರ್ಚಾ ಜಿಲ್ಲಾ ಪ್ರ. ಕಾರ್ಯದರ್ಶಿ ಮೆಕಲ್ ವಿರೇಶ್, ಹರಪನಹಳ್ಳಿ ತಾಪಂ ಉಪಾಧ್ಯಕ್ಷ ಎಲ್. ಮಂಜು ನಾಯ್ಕ, ಎಸ್ಸಿ ಮೋರ್ಚಾ ತಾಲೂಕಾಧ್ಯಕ್ಷ ರಾಘವೇಂದ್ರ ಜೆ.ಬಿ., ಮಂಡಲ ಪ್ರ. ಕಾರ್ಯದರ್ಶಿ ಜೀವರತ್ನಂ, ಮುಖಂಡರಾದ ಮಹದೇವ, ಎಸ್.ಎಚ್. ಮಲ್ಲಪ್ಪ, ಚನ್ನಕೇಶವ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.