ಸುಗ್ರೀವಾಜ್ಞೆ ರಾಜ್ಯಪಾಲರ ಅಂಕಿತ ಶೀಘ್ರ ಶಿಕ್ಷಕರ ವರ್ಗಾವಣೆ

ಬೆಂಗಳೂರು,ಏ.೩೦- ಶಿಕ್ಷಕರ ವರ್ಗಾವಣೆ ಸಂಬಂಧ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದು, ಸಧ್ಯದಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ.
ಶಿಕ್ಷಕರ ವರ್ಗಾವಣೆ ಸಂಬಂಧ ರಾಜ್ಯಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಕಳೆದ ಸಚಿವ ಸಂಪುಟದಲ್ಲಿ ಶಿಕ್ಷಕರ ವರ್ಗಾವಣೆ ಸಂಬಂಧ ಸುಗ್ರೀವಾಜ್ಞೆ ಜಾರಿ ಮಾಡಲು ತೀರ್ಮಾನಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.
ರಾಜ್ಯಪಾಲರು ಸರ್ಕಾರದ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಸುಗ್ರೀವಾಜ್ಞೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲು ಕ್ರಮ ವಹಿಸಲಾಗಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಅತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೧೯-೨೦೨೦ನೇ ಸಾಲಿನಲ್ಲಿ ಕಡ್ಡಾಯ ಹೆಚ್ಚುವರಿ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಒಂದು ಬಾರಿ ವಿಶೇಷ ಅವಕಾಶ ಕಲ್ಪಿಸಬೇಕು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕು ಜಿಲ್ಲೆಗಳಲ್ಲಿ ಲಭ್ಯವಿರುವ ಹುದ್ದೆಗಳಿಗೆ ಮೊದಲ ಆಧ್ಯತೆ ಮೇರೆಗೆ ವರ್ಗಾವಣೆ ಮಾಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಶಿಕ್ಷಕರ ವರ್ಗಾವಣೆ ಸಂಬಂಧ ೭೨ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲ ಅರ್ಜಿಗಳನ್ನು ಶಿಕ್ಷಕಮಿತ್ರ ಆಪ್ ಮೂಲಕವೇ ನಿರ್ವಹಿಸಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಶಿಕ್ಷಕರು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಈ ವರ್ಗಾವಣೆ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿರಬೇಕು. ಕಾಲಮಿತಿಯಲ್ಲಿ ವರ್ಗಾವಣೆ ಪ್ರಕ್ರಿಯೆನನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.
ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಯಿಂದ ಸುಮಾರು ಮೂರುವರೆ ಸಾವಿರ ಶಿಕ್ಷಕರು ತೊಂದರೆಗೆ ಸಿಲುಕಿದ್ದರು. ಮಾನವೀಯ ನೆಲೆಗಟ್ಟಿನಲ್ಲಿ ಇವರಿಗೆ ನ್ಯಾಯ ಒದಗಿಸಲು ಸುಗ್ರೀವಾಜ್ಞೆ ತಂದು ವರ್ಗಾವಣೆಗೆ ಚಾಲನೆ ನೀಡುತ್ತಿದ್ದೇವೆ. ಶಿಕ್ಷಕ ಸ್ನೇಹಿಯಾದ ವರ್ಗಾವಣೆ ಪ್ರಕ್ರಿಯೆಯನ್ನು ಅಡೆತಡೆ ಇಲ್ಲದೆ ಪೂರ್ಣಗೊಳಿಸಲು ಎಲ್ಲ ಶಿಕ್ಷಕರು ಶಿಕ್ಷಕ ಸಂಘಟನೆಗಳು ಸಹಕಾರ ನೀಡಬೇಕು ಎಂದು ಅವರು ಕೋರಿದ್ದಾರೆ.