ಸುಗೂರ(ಕೆ) ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪವನದಾಸ ಮಹಾರಾಜ ದೈವಾಧಿನ

ಕಾಳಗಿ. ಮೇ.2 : ತಾಲೂಕಿನ ಸುಗೂರ(ಕೆ) ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪವನದಾಸ ಮಹಾರಾಜ ಶನಿವಾರ ತೀವ್ರ ಹೃದಯಾಘಾತದಿಂದ ದೈವಾಧಿನರಾದರೆಂದು ದೇವಸ್ಥಾನದ ಭಕ್ತ ಸಮೂಹದಿಂದ ತಿಳಿದುಬಂದಿದೆ.
ಪವರದಾಸ ಮಹಾರಾಜರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಸುಮಾರು ವರ್ಷಗಳ ಕಾಲ ಶ್ರೀ ವೆಂಕಟೇಶ್ವರಸ್ವಾಮಿಯ ಮೂಲಸ್ಥಾನವಾದ ಕಾಳಗಿ ತಾಲೂಕಿನ ಸುವರ್ಣಗಿರಿ ಸುಗೂರ(ಕೆ) ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ ಶ್ರೀಗಳು ಸಾವಿರಾರು ಜನ ಭಕ್ತರ ಹೃದಯಂತರಾಳದಲ್ಲಿ ಮನೆಮಾಡಿಕೊಂಡು ಉಚಿತ ವೇದ, ಉಪನಿಷತ್ತು, ಸಂಸ್ಕೃತಿ ಪಾಠ, ಸಂಸ್ಕಾರ, ಆಚಾರ, ವಿಚಾರ ನೀಡಿ ಸಾರ್ವಜನಿಕರಿಗೆ ಸಮ್ಮಾರ್ಗದರ್ಶಿಗಳಾಗಿದ್ದರು.
ಶ್ರೀಗಳ ಅಗಲಿಕೆಯಿಂದ ಸಂಪೂರ್ಣ ದೇವಸ್ಥಾನ ಬಡವಾದಂತಾಗಿದೆ.
ಇತ್ತೀಚೆಗೆ ಉತ್ತರ ಖಂಡದ ಹರಿದ್ವಾರದಲ್ಲಿ ನಡೆದ ‘ಕುಂಭಮೇಳ’ ದಲ್ಲಿ ಪಾಲ್ಗೊಂಡು 20 ಏಪ್ರಿಲ್ ನಲ್ಲಿ ದೇವಸ್ಥಾನಕ್ಕೆ ಬಂದಿದ್ದು, ಆರೋಗ್ಯದಲ್ಲಿ ಏರುಪೇರು ಕಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರಿಗೆ ಕೊವಿಡ್ ಸೋಂಕು ತಗುಲಿರುವುದಾಗಿಯೂ ತಿಳಿದುಬಂದಿದೆ.
ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸೋಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಶಿವನಪಾದ ಸೇರಿರುವುದಾಗಿ ದೇವಸ್ಥಾನದ ಭಕ್ತಗಣ ತಿಳಿಸಿವೆ.